ADVERTISEMENT

ಕಾಂಗ್ರೆಸ್‌ ಮಹಿಳಾ ಘಟಕದಿಂದ ಪ್ರತಿಭಟನೆ

ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಆರ್ಥಿಕ ವ್ಯವಸ್ಥೆಗೆ ಧಕ್ಕೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:44 IST
Last Updated 10 ಜನವರಿ 2017, 5:44 IST
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗಿರುವುದನ್ನು ಖಂಡಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ತಟ್ಟೆಯನ್ನು ಸೌಟಿನಿಂದ ಬಾರಿಸುತ್ತಾ ಕಾರವಾರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗಿರುವುದನ್ನು ಖಂಡಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ತಟ್ಟೆಯನ್ನು ಸೌಟಿನಿಂದ ಬಾರಿಸುತ್ತಾ ಕಾರವಾರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   
ಕಾರವಾರ: ಗರಿಷ್ಠ ಮುಖಬೆಲೆಯ ನೋಟು­ಗಳ ರದ್ದತಿಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಆಗಿರುವುದನ್ನು ಖಂಡಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಮುಖಂಡರು ಹಾಗೂ ಕಾರ್ಯ­ಕರ್ತೆಯರು ಸೋಮವಾರ ಕಾರವಾರ­ದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. 
 
ಇಲ್ಲಿನ ಬಿಲ್ಟ್‌ ವೃತ್ತದಿಂದ ಮೆರವ­ಣಿಗೆಯಲ್ಲಿ ಹೊರಟ ನೂರಾರು ಮಹಿಳೆ­ಯರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾವೇಶಗೊಂಡರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸುಷ್ಮಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕಲಾವತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಗೌಡ ಅವರು ತಟ್ಟೆ ಹಿಡಿದು ಸೌಟಿನಿಂದ ಬಾರಿಸುವ ಮೂಲಕ ಗಮನ ಸೆಳೆದರು. 
 
ಚಿಲ್ಲರೆಗಾಗಿ ಪರದಾಟ 
‘ಕಾಳಧನ ಹಾಗೂ ಭ್ರಷ್ಟಾಚಾರ­ವನ್ನು ತಡೆಗಟ್ಟುವ ನಿಟ್ಟಿನಲ್ಲಿ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಾಗ ಪ್ರಧಾನಿ ಮೋದಿ ಅವರ ಕ್ರಮವನ್ನು ಎಲ್ಲರೂ ಬೆಂಬಲಿಸಿದರು. ಆದರೆ ಮೋದಿ ಅವರು ಯಾವ ಉದ್ದೇಶಕ್ಕೆ ಗರಿಷ್ಠ ಮುಖಬೆಲೆ ನೋಟುಗಳನ್ನು ರದ್ದು ಮಾಡಿದರು ಎಂಬ ವಿಚಾರ ಕ್ರಮೇಣ ಜನಸಾಮಾನ್ಯ­ರಿಗೆ ಅರಿವಾಗಿದೆ. ಬಡವರು ಚಿಲ್ಲರೆ ಹಣಕ್ಕಾಗಿ ಪರದಾಡುವಂತಾಗಿದೆ. ಎಟಿಎಂ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ. ಈ ವೇಳೆ ಎಷ್ಟೋ ಮಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಲ್ಲದೇ ಜೀವಹಾನಿ ಕೂಡ ಆಗಿದೆ. ಒಟ್ಟಾರೆ ಜನಜೀವನ ಅಸ್ತವ್ಯಸ್ತ ಆಗಿದೆ’ ಎಂದು ಶಾಸಕಿ ಶಾರದಾ ಮೋಹನ ಶೆಟ್ಟಿ ಕಿಡಿಕಾರಿದರು. 
 
ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸುಷ್ಮಾ ರೆಡ್ಡಿ ಮಾತನಾಡಿ, ನೋಟು ರದ್ದತಿಯ ದುಷ್ಪರಿಣಾಮ ಗೃಹಿಣಿಯರಿಗೂ ತಟ್ಟಿದೆ. ಅವರು ಅಲ್ಪ ಸ್ವಲ್ಪ ಉಳಿಸಿ ಮನೆಯಲ್ಲಿದ್ದ ಹಣವನ್ನು ಬ್ಯಾಂಕಿಗೆ ತುಂಬಲು ಹರಸಾಹಸ ಪಡಬೇಕಾಯಿತು. ಇದೀಗ ₹ 2,000 ಮುಖಬೆಲೆಯ ನೋಟು ಚಲಾವಣೆಯಲ್ಲಿದೆ. ಅದನ್ನು ಯಾವಾಗ ಹಿಂದಕ್ಕೆ ಪಡೆಯುತ್ತಾರೋ ಗೊತ್ತಿಲ್ಲ. ಪ್ರಧಾನಿ ಮೋದಿ ಅವರು ಜನರನ್ನು ಬೆಳಕಿನಿಂದ ಕತ್ತಲೆಯೆಡೆಗೆ ಕರೆದೊಯ್ಯುತ್ತಿದ್ದಾರೆ. ಇದೀಗ ನಾವೆಲ್ಲ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
***
ಚಕಮಕಿ...
ಪ್ರತಿಭಟನಾಕಾರರನ್ನು ಜಿಲ್ಲಾಧಿ­ಕಾರಿ ಕಚೇರಿ ಬಳಿ ಪೊಲೀಸರು ಅಡ್ಡಗಟ್ಟಿದರು. ಈ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಆಗ್ರಹಿಸಿದ ಅವರು, ಪೊಲೀಸರ ಜತೆ ವಾಗ್ವಾದಕ್ಕಿಳಿದರು. ಆನಂತರ ಸ್ಥಳಕ್ಕೆ ಬಂದ ಜಿಲ್ಲಾಧಿ­ಕಾರಿ ಎಸ್‌.ಎಸ್‌.ನಕುಲ್‌ ಅವರು ಮನವಿ ಸ್ವೀಕರಿಸಿದರು. ಯುವ ಕಾಂಗ್ರೆಸ್‌ ಮುಖಂಡರಾದ ಶ್ರೀಪಾದ ಹೆಗಡೆ, ಸಂತೋಷ ಶೆಟ್ಟಿ, ಸಯ್ಯದ್‌ ಅಶ್ರಫ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
 
**
ದೇಶದ ಆರ್ಥಿಕ ವ್ಯವಸ್ಥೆ ಸರಿ­ದಾರಿಗೆ ಬರದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾ­ಗುವುದು  
-ಶಾರದಾ ಮೋಹನ ಶೆಟ್ಟಿ,
ಕುಮಟಾ ಕ್ಷೇತ್ರದ ಶಾಸಕಿ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.