ADVERTISEMENT

‘ಕ್ಷಯ ರೋಗ: ತಾತ್ಸಾರ ಭಾವನೆ ಬೇಡ’

ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ: ರೋಗ ಪತ್ತೆ,ರೋಗಕ್ಕೆ ಚಿಕಿತ್ಸೆ ಉಚಿತ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 9:08 IST
Last Updated 25 ಮಾರ್ಚ್ 2017, 9:08 IST

ಕಾರವಾರ: ಕ್ಷಯ ರೋಗಿಗಳು ತಮ್ಮ ಕಾಯಿಲೆ ಬಗ್ಗೆ ಹೇಳಿಕೊಳ್ಳಲು ಸಂಕೋಚ, ತಾತ್ಸಾರ ಭಾವನೆ ತೋರುತ್ತಾರೆ. ಇದರಿಂದ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಭಟ್‌ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ರೋಗಿಗಳು ಸಂಕೋಚ ಬಿಟ್ಟು ತಮ್ಮಲ್ಲಿನ ಕಾಯಿಲೆ ನಿವಾರಣೆಗೆ ವೈದ್ಯರಿಂದ ಸಲಹೆ ಪಡೆಯಬೇಕು. ಅಲ್ಲದೇ ನೆರೆಹೊರೆಯವರಿಗೂ ಈ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಮಹಾಬಲೇಶ್ವರ ಹೆಗಡೆ ಮಾತನಾಡಿ, ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಜನ ಜಾಗೃತಿ ಮೂಡದ ಹೊರತು ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ರೋಗದ ಕುರಿತು ಜನತೆಯಲ್ಲಿ ಮಾಹಿತಿಯ ಕೊರತೆ ಇದೆ ಎಂದು ಹೇಳಿದರು.

ಕ್ಷಯ ರೋಗಕ್ಕೆ ಆರು ತಿಂಗಳಿಂದ ಒಂಬತ್ತು ತಿಂಗಳು ಔಷಧಿ ತೆಗೆದುಕೊಳ್ಳಬೇಕು. ರೋಗ ಪತ್ತೆ ಹಚ್ಚುವುದು ಮತ್ತು ರೋಗಕ್ಕೆ ಚಿಕಿತ್ಸೆ ನೀಡುವುದು ಉಚಿತವಾಗಿದೆ. ಕ್ರಮಬದ್ಧ ಮಾತ್ರೆ ಸೇವನೆಯಿಂದ ಕ್ಷಯವನ್ನು ತಡೆಯಬಹುದಾಗಿದ್ದು, ರೋಗ ಪೀಡಿತರು ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆಯ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ಕ್ಷಯ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಅಗತ್ಯ ಚಿಕಿತ್ಸೆ ನೀಡದಿದ್ದರೆ ಅದು ಮಾರಣಾಂತಿಕ ರೋಗವಾಗಿ ನಮ್ಮನ್ನೇ ನುಂಗಲಿದೆ.

ಕ್ಷಯ ಅತೀ ಸೂಕ್ಷ್ಮ ರೋಗವಾಗಿದೆಯಾದರೂ ಗುಣಪಡಿಸದಂತಹ ಕಾಯಿಲೆ ಅಲ್ಲ. ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಆಗಿರುವುದರಿಂದ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕ್ಷಯ ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ ಕುಮಾರ್, ಕುಷ್ಟರೋಗ ನಿಯಂತ್ರಣಾಧಿ ಕಾರಿ ಡಾ.ಶಂಕರ ರಾವ್, ಡಾ.ವಿನೋದ, ಡಾ.ರಮೇಶ ರಾವ್, ಡಾ. ಕಿಶೋರ್‌ಕುಮಾರ್ ಉಪಸ್ಥಿತರಿದ್ದರು.

ಮೆರವಣಿಗೆ: ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಡಿಎಚ್‌ಒ ಕಚೇರಿಯನ್ನು ತಲುಪಿತು. ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕ್ಷಯ ರೋಗಕ್ಕೆ 68 ಮಂದಿ ಬಲಿ
2016ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 12 ಸಾವಿರ ಮಂದಿಯನ್ನು ಕಫ ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 972 ಮಂದಿಯಲ್ಲಿ ರೋಗ ಪತ್ತೆಯಾಗಿದೆ. ಅವರಲ್ಲಿ 908 ಮಂದಿ ಚಿಕಿತ್ಸೆ ಪೂರ್ಣಗೊಳಿಸಿದ್ದು, 52 ಮಂದಿ ಅರ್ಧದಲ್ಲೇ ಚಿಕಿತ್ಸೆ ಬಿಟ್ಟಿದ್ದಾರೆ. 68 ಮಂದಿ ಮರಣ ಹೊಂದಿದ್ದಾರೆ.

ಮೊದಲ ಹಂತದಲ್ಲಿ ರೋಗದ ಔಷಧಿಗಳನ್ನು ಸರಿಯಾದ ವಿಧಾನದಲ್ಲಿ ಸೇವಿಸದೇ, ಗುಣಪಡಿಸಲು ಕಷ್ಟಕರವಾದ ಎಂ.ಡಿ.ಆರ್ ಕ್ಷಯ ರೋಗ 13 ಜನರಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT