ADVERTISEMENT

ಚರಂಡಿ ಹೂಳೆತ್ತುವ ಕಾರ್ಯಕ್ಕೆ ಆಮೆವೇಗ

ಪಿ.ಕೆ.ರವಿಕುಮಾರ
Published 19 ಏಪ್ರಿಲ್ 2017, 5:58 IST
Last Updated 19 ಏಪ್ರಿಲ್ 2017, 5:58 IST
ಕಾರವಾರ ಮಾಲಾದೇವಿ ಮೈದಾನದ ಬಳಿಯ ಕೋಣೆನಾಲಾದ ಹೂಳನ್ನು ಜೆಸಿಬಿ ಮೂಲಕ ತೆಗೆಯುತ್ತಿರುವುದು (ಎಡಚಿತ್ರ), ಜಿಲ್ಲಾ ಸಶಸ್ತ್ರ ಪೊಲೀಸ್‌ ಠಾಣೆ ಬಳಿಯ ಚರಂಡಿಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕ
ಕಾರವಾರ ಮಾಲಾದೇವಿ ಮೈದಾನದ ಬಳಿಯ ಕೋಣೆನಾಲಾದ ಹೂಳನ್ನು ಜೆಸಿಬಿ ಮೂಲಕ ತೆಗೆಯುತ್ತಿರುವುದು (ಎಡಚಿತ್ರ), ಜಿಲ್ಲಾ ಸಶಸ್ತ್ರ ಪೊಲೀಸ್‌ ಠಾಣೆ ಬಳಿಯ ಚರಂಡಿಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕ   

ಕಾರವಾರ: ನಗರದಲ್ಲಿನ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ತಿಂಗಳ ಹಿಂದೆಯೇ ನಗರಸಭೆ ಚಾಲನೆ ನೀಡಿದೆ. ಆದರೆ ಪೌರ­ಕಾರ್ಮಿಕರ ಕೊರತೆಯಿಂದ ಹೂಳೆತ್ತುವ ಕಾರ್ಯ ಆಮೆಗತಿಯಲ್ಲಿ ಸಾಗಿದೆ.ಪ್ರತಿ ವರ್ಷ ಮಳೆಗಾಲ ಸಮೀಪಿ­ಸುತ್ತಿದ್ದಂತೆ ನಗರಸಭೆಯು ಚರಂಡಿಯ ಹೂಳು ತೆಗೆಯಲು ಟೆಂಡರ್‌ ಕರೆದು ಖಾಸಗಿಯವರಿಗೆ ಗುತ್ತಿಗೆ ನೀಡುತಿತ್ತು. ಕಳೆದ ಬಾರಿಯ ಕಾಮಗಾರಿ ಬಗ್ಗೆ ಆಕ್ಷೇ­ಪಗಳು ಕೇಳಿಬಂದ ನಿಮಿತ್ತ ಈ ಸಲ ನಗರಸಭೆಯೇ ಹೂಳು ತೆಗೆಯುವ ಕಾರ್ಯಕ್ಕೆ ಕೈಹಾಕಿದೆ. ಕಳೆದ ಮಾರ್ಚ್‌ ತಿಂಗಳ ಆರಂಭದಲ್ಲಿಯೇ ಈ ಕಾಮ­ಗಾರಿಗೆ ಚಾಲನೆ ಸಿಕ್ಕಿದೆ. ಪ್ರಥಮ ಹಂತದಲ್ಲಿ ನಗರಸಭೆಯ 7 ವಾರ್ಡ್‌­ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ 24 ವಾರ್ಡ್‌ಗಳಲ್ಲಿ ಆರಂಭ­ಗೊಳ್ಳಬೇಕಿದೆ.

ನಗರಸಭೆ ವ್ಯಾಪ್ತಿಯ ಬೈತಖೋಲ್‌, ಕೋಡಿಬಾಗ, ತಾಮ್ಸೆವಾಡ, ನದಿವಾಡ, ಗಾಂಧಿನಗರ, ಬಿಣಗಾ ಮುಂತಾದ ಕಡೆಗಳಲ್ಲಿ ಈಗಾಗಲೇ ಚರಂಡಿಗಳ ಹೂಳೆತ್ತುವ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ. ದೊಡ್ಡ ಚರಂಡಿಗಳ ಹೂಳೆತ್ತುವುದಕ್ಕೆ ನಗರಸಭೆಯ ಜೆಸಿಬಿಯನ್ನು ಬಳಸಲಾಗುತ್ತಿದೆ. ಇನ್ನು ಸಣ್ಣ ಪುಟ್ಟ ಗಟಾರಗಳಲ್ಲಿನ ಹೂಳನ್ನು ನಗರಸಭೆಯ ಪೌರಕಾರ್ಮಿಕರ ಮೂಲಕ ತೆಗೆಸಲಾಗುತ್ತಿದೆ. ಹೂಳಿನ ಜತೆಗೆ ಶೇಖರಣೆಗೊಂಡಿದ್ದ ಒಣಗಿದ ಎಲೆಗಳು, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಚರಂಡಿಯ ಒಂದು ಬದಿಯಲ್ಲೇ ಹಾಕಿಕೊಂಡು ನಂತರ ಅದನ್ನು ನಗರಸಭೆ ವಾಹನಗಳ ಮೂಲಕ ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

‘ಸಂಕ್ರಿವಾಡ ಹಾಗೂ ಖುರ್ಸಾವಾಡ ಭಾಗದ ಗಟಾರದಲ್ಲಿ ತುಂಬಿದ್ದ ಹೂಳನ್ನು ಮೂರ್‍ನಾಲ್ಕು ದಿನಗಳ ಹಿಂದೆ ತೆಗೆದು, ಗಟಾರದ ಅಂಚಿಗೆ ಗುಡ್ಡೆ ಹಾಕಲಾಗಿದೆ. ಆದರೆ ಇನ್ನೂ ಇದನ್ನು ತೆರವು ಮಾಡಿಲ್ಲ. ಹೀಗಾಗಿ ಇದು ಮತ್ತೆ ಗಟಾರ ಸೇರುತಿದೆ. ಅಲ್ಲದೇ ವಾಹನಗಳ ಸಂಚಾರಕ್ಕೂ ಕಿರಿಕಿರಿಯಾಗುತಿದೆ’ ಎನ್ನುತ್ತಾರೆ ಖುರ್ಸಾವಾಡದ  ನಿತಿನ್‌ ನಾಯ್ಕ.

ADVERTISEMENT

‘ಕಳೆದ ಬಾರಿ ನಗರಸಭೆ ವ್ಯಾಪ್ತಿಯಲ್ಲಿನ ಚರಂಡಿ ಹೂಳೆತ್ತಲು ಗುತ್ತಿಗೆ ನೀಡಲಾಗಿತ್ತು. ಮಳೆಗಾಲ ಸಮೀಪವಾಗಿದ್ದರಿಂದ ಸಮರ್ಪಕವಾಗಿ ಹೂಳು ತೆಗೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಮಳೆಗಾಲ ಇನ್ನೂ ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕಳೆದ ಬಾರಿ ಕೋಣೆನಾಲದ ಹೂಳು ತೆಗೆಯಲು ₹ 10,00,000 ಸೇರಿದಂತೆ ಒಟ್ಟಾರೆ ₹ 29,00,000 ವೆಚ್ಚ ಮಾಡಲಾಗಿತ್ತು. ಈ ಸಲ 19,00,000 ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ’ ಎಂದು ನಗರಸಭೆಯ ಪ್ರಭಾರ ಪೌರಾಯುಕ್ತ ಕೆ.ಎಂ.ಮೋಹನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.