ADVERTISEMENT

ಜಾಗೃತಿಯಿಂದ ಬಾಲ್ಯ ವಿವಾಹ ನಿಯಂತ್ರಣ

‘ಶಾಲೆ ಕಡೆ ನನ್ನ ನಡೆ’ ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:24 IST
Last Updated 22 ಏಪ್ರಿಲ್ 2017, 7:24 IST
ಜಾಗೃತಿಯಿಂದ ಬಾಲ್ಯ ವಿವಾಹ ನಿಯಂತ್ರಣ
ಜಾಗೃತಿಯಿಂದ ಬಾಲ್ಯ ವಿವಾಹ ನಿಯಂತ್ರಣ   
ಬನವಾಸಿ: ಶಿಕ್ಷಣ ಹಾಗೂ ಕಾನೂನು ಜ್ಞಾನದ ಕೊರತೆಯಿಂದ ಬಾಲ್ಯ ವಿವಾಹ ಪದ್ಧತಿ ಜೀವಂತವಾಗಿದೆ. ಸಂಪ್ರದಾಯದ ಅಡಿಯಲ್ಲಿ ನಡೆಯುವ ಬಾಲ್ಯ ವಿವಾಹವನ್ನು ಕಾನೂನು ಜಾಗೃತಿ ಮೂಲಕ ನಿಯಂತ್ರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ ಹೇಳಿದರು. 
 
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಲ್ಯ ವಿವಾಹ ಜಾಗೃತಿ ಮತ್ತು ‘ಶಾಲೆ ಕಡೆ ನನ್ನ ನಡೆ’ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
 
ನ್ಯಾಯಾಧೀಶ ಶಮೀರ ನಂದ್ಯಾಳ ಮಾತನಾಡಿ ‘ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುವುದು ಕಾನೂನುಬಾಹಿರ ಕೃತ್ಯವಾಗಿದೆ. ಈ ಅನಿಷ್ಟ ಪದ್ಧತಿ ನಿಯಂತ್ರಿಸಲು ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಬಾಲ್ಯ ವಿವಾಹ ನಡೆಯುವ ಸಂಗತಿ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದರು. 
 
ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ್ ಮಾತನಾಡಿ ‘ಮಕ್ಕಳು ಶಿಕ್ಷಣ ಪಡೆಯುವ ಮೂಲಕ ದೇಶದ ಆಸ್ತಿಯಾಗಬೇಕು. ಮಕ್ಕಳನ್ನು ದುಡಿಮೆಗೆ ಕಳುಹಿಸಿ ಶಿಕ್ಷಣ ವಂಚಿತರನ್ನಾಗಿ ಮಾಡಬಾರದು’ ಎಂದರು. 
 
‘ಮಕ್ಕಳನ್ನು ದುಡಿಮೆಗೆ ಹಚ್ಚಿದರೆ, ಅವರಿಗೆ ಶಿಕ್ಷೆ ಆಗುತ್ತದೆ. ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹೀಗಾಗಿ, ಮಕ್ಕಳ ಹಕ್ಕುಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ.
 
ಪೋಷಕರು ಇದನ್ನು ಅರಿತುಕೊಳ್ಳಬೇಕು’ ಎಂದು ಅವರು ಪ್ರತಿಪಾದಿಸಿದರು. ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. 
 
ಶಿಕ್ಷಣ ಹಕ್ಕು ಕಾಯ್ದೆ ಕುರಿತು ಎಂ.ಕೆ. ಮೊಗೇರ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ವಕೀಲ ಶಿವರಾಯ ದೇಸಾಯಿ ಮಾತನಾಡಿದರು. ವಕೀಲ ಮಧುಲಿಂಗ ನಾಯ್ಕ ಸ್ವಾಗತಿಸಿದರು. ಸಿ.ಎಫ್. ಈರೇಶ ನಿರೂಪಿಸಿದರು. ಎನ್.ಆರ್.ನಾಯ್ಕ ವಂದಿಸಿದರು. 
 
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಜಾಗೃತಿ ರ್‍ಯಾಲಿ ನಡೆಯಿತು. ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಭಾಗವಹಿಸಿದ್ದರು. ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯ್ತಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.