ADVERTISEMENT

‘ಜಿಎಸ್‌ಟಿಯಿಂದ ಜಿಡಿಪಿ ದರ ಏರಿಕೆ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:43 IST
Last Updated 7 ಜುಲೈ 2017, 9:43 IST

ಭಟ್ಕಳ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಹಾಗೂ ಸೇವಾ ತೆರಿಗೆಯಿಂದ ದೇಶದ ಜಿಡಿಪಿ ದರ ಏರಿಕೆಯಾಗಲಿದ್ದು, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ನೆರವು ಸಿಗಲಿದೆ’ ಎಂದು ಧಾರವಾಡ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಎಸ್. ಗುಂಡೂರಾವ್ ಹೇಳಿದರು.

ಇಲ್ಲಿನ ರಬಿತಾ ಸೊಸೈಟಿ ಸಭಾಂಗಣದಲ್ಲಿ ತಾಲ್ಲೂಕು ವರ್ತಕರ ಸಂಘ ಆಯೋಜಿಸಿದ್ದ ಜಿಎಸ್‌ಟಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ‘ವರ್ತಕರಿಗೆ ಜಿಎಸ್‌ಟಿ ತೀರ ಹೊಸದು ಎಂಬ ಆತಂಕ ಬೇಡ. ಅಭಿವೃದ್ಧಿ ಹೊಂದಿದ ವ್ಯಾಟ್ ತೆರಿಗೆ ಎಂದು ತಿಳಿದುಕೊಳ್ಳಬಹುದು.

ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆಗಳು ಈಗ ಒಂದೇ ತೆರಿಗೆಯಡಿಯಲ್ಲಿ ಬರಲಿದೆ. ಜಿಎಸ್‌ಟಿ ಜಾರಿಯಿಂದ ರಾಜ್ಯದಲ್ಲಿರುವ ತಪಾಸಣಾ ಕೇಂದ್ರದಲ್ಲಿ ಬದಲಾವಣೆ ಹೊಂದಲಿದೆ. ರಾಜ್ಯದ ಗಡಿಗಳಲ್ಲಿ ವಸೂಲಾತಿ ನಿಲ್ಲಲಿದೆ. ಅಮೂಲ್ಯ ಸಮಯ ಉಳಿತಾಯವಾಗಲಿದೆ’ ಎಂದು ವಿವರಿಸಿದರು.

ADVERTISEMENT

ಜಂಟಿ ಆಯುಕ್ತ ರಮೇಶಕುಮಾರ್ ಮಾತನಾಡಿ, ‘ಜಿಎಸ್‌ಟಿಯು ವರ್ತಕರ ಸ್ನೇಹಿಯಾಗಿದೆ. ಉತ್ಪನ್ನಗಳನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾರಾಟ ವ್ಯವಹಾರ ಮಾಡಬಹುದಾಗಿದೆ. ಇನ್‌ವಾಸ್‌ ಕಾರ್ಯ ಸುಲಭವಾಗಲಿದೆ. ಜಿಎಸ್‌ಟಿಯನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದರು.

ಕುಮಟಾ ತೆರಿಗೆ ವಿಭಾಗದ ಸಹಾಯಕ ಆಯುಕ್ತ ಭರತೇಶಕುಮಾರ್, ವರ್ತಕರ ವ್ಯಾಪಾರ ವಹಿವಾಟು ವಾರ್ಷಿಕ ₹20 ಲಕ್ಷಕ್ಕಿಂತ ಕಡಿಮೆ ಇದ್ದರೂ ಅಂತರಾಜ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದರೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ. ಏಜೆಂಟರೂ ಇದಕ್ಕೆ ಹೊರತಾಗಿಲ್ಲ ಎಂದರು.

ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಕುರಿತ ಸಭಿಕರ ಹತ್ತಾರು ಸಂದೇಹ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು. ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ ಪ್ರಭು ಸ್ವಾಗತಿಸಿದರು. ಹೊನ್ನಾವರ ವಾಣಿಜ್ಯ ತೆರಿಗೆ ಅಧಿಕಾರಿ ಮಹ್ಮದ್ ಶರೀಫ್ ಲಕ್ಷೇಶ್ವರ, ವರ್ತಕರ ಸಂಘದ ಕಾರ್ಯದರ್ಶಿ ಇಸ್ಮಾಯಿಲ್‌ ಸಿದ್ದಿಕ್ ಉಪಸ್ಥಿತರಿದ್ದರು. ಮಂಜುನಾಥ ಪ್ರಭು ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಯಿಂದ 500ಕ್ಕೂ ಹೆಚ್ಚು ವರ್ತಕರು, ಬ್ಯಾಂಕ್ ಅಧಿಕಾರಿಗಳು, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.