ADVERTISEMENT

ಜಿಲ್ಲೆಗೆ 4 ಸಂಚಾರಿ ಆರೋಗŀ ಘಟಕ

ಗುಡ್ಡಗಾಡು ಮತ್ತು ಕುಗ್ರಾಮಗಳ ಜನರಿಗೆ ಸ್ಥಳೀಯವಾಗಿ ಪ್ರಾಥಮಿಕ ಆರೋಗ್ಯ ಸೇವೆ ಲಭ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:33 IST
Last Updated 28 ಜನವರಿ 2017, 10:33 IST
ಜಿಲ್ಲೆಗೆ 4 ಸಂಚಾರಿ ಆರೋಗŀ ಘಟಕ
ಜಿಲ್ಲೆಗೆ 4 ಸಂಚಾರಿ ಆರೋಗŀ ಘಟಕ   

ಕಾರವಾರ: ಪ್ರಾಥಮಿಕ ಆರೋಗ್ಯ ಸೇವೆಗಾಗಿ ಗುಡ್ಡಗಾಡು ಹಾಗೂ ಕುಗ್ರಾಮಗಳ ಜನರು ಇನ್ನೂ ನಗರ ಹಾಗೂ ಪಟ್ಟಣಕ್ಕೆ ಅಲೆಯಬೇಕಿಲ್ಲ. ಅವರಿಗೆ ಸ್ಥಳೀಯವಾಗಿಯೇ ವೈದ್ಯಕೀಯ ಸೌಲಭ್ಯ ಒದಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಉತ್ತರ ಕನ್ನಡ ಜಿಲ್ಲೆಗೆ ನಾಲ್ಕು ಸಂಚಾರಿ ಆರೋಗ್ಯ ಘಟಕ ವಾಹನಗಳನ್ನು ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ  ಈ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಆರಂಭಿಸಿದ್ದು, ಇದರ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ ವಹಿಸಿಕೊಂಡಿದೆ. ಜಿಲ್ಲೆಯ ಜೊಯಿಡಾ, ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ಒಂದೊಂದು ವಾಹನ ಸಂಚರಿಸಲಿದೆ.

‘ರಾಜ್ಯದ ಸಮಸ್ತ ನಾಗರಿಕರಿಗೂ ವ್ಯವಸ್ಥಿತವಾದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ  ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅದರಲ್ಲಿ ಇದು ಕೂಡ ಒಂದು. ಈವರೆಗೂ ಸರಿಯಾದ ಆರೋಗ್ಯ ಸೇವೆ ಲಭ್ಯವಾಗದ ಗುಡ್ಡಗಾಡು ಹಾಗೂ ತೀರಾ ಹಿಂದುಳಿದ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರು, ಬಡತನ ರೇಖೆಗಿಂತ ಕೆಳಗಿರುವ ಹಾಗೂ ಆರೋಗ್ಯ ಸೌಲಭ್ಯಗಳಿಂದ ವಂಚಿತರಾದ ಗ್ರಾಮಸ್ಥರಿಗೆ ಸುವ್ಯವಸ್ಥಿತವಾದ ಪ್ರಾಥಮಿಕ ಆರೋಗ್ಯ ಸೇವೆಯು ಈ ಘಟಕದಿಂದ ಲಭ್ಯವಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಅಶೋಕಕುಮಾರ್‌ ಹೇಳಿದರು.

ಸುಸಜ್ಜಿತ ವಾಹನ: ‘ಪ್ರಾಥಮಿಕ ಸೇವೆಗಳಿಗೆ ಅವಶ್ಯವಿರುವ ಉದ್ದೇಶದಿಂದ ಸುಸಜ್ಜಿತ ಹಾಗೂ ಹವಾನಿಯಂತ್ರಿತ ವಾಹನವನ್ನು ಖರೀದಿಸಲಾಗಿದ್ದು, ವಾಹನದ ಒಳಾಂಗಣವನ್ನು ಅಗತ್ಯ ಮಾರ್ಪಾಡು ಮಾಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಕೃತಕ ಉಸಿರಾಟ, ಆಮ್ಲಜನಕ ಪೂರೈಕೆ ವ್ಯವಸ್ಥೆ ಇದರಲ್ಲಿದೆ. ತುರ್ತು ಚಿಕಿತ್ಸೆಗೆ ಅವಶ್ಯವಿರುವ ವೈದ್ಯಕೀಯ ಸಲಕರಣೆಗಳು, ಲಘು ಶಸ್ತ್ರಚಿಕಿತ್ಸೆಗೆ ಬೆಳಕಿನ ವ್ಯವಸ್ಥೆ, ವೈದ್ಯರು, ಶುಶ್ರೂಷಕಿಯರು, ಔಷಧಿ ವಿತರಕರು, ಸಹಾಯಕರು ಪ್ರಯಾಣಿಸಲು ಅವಶ್ಯ ಆಸನಗಳು ಈ ವಾಹನದಲ್ಲಿ ಅಳವಡಿಸಲಾಗಿದೆ’ ಎಂದು ಸ್ಕೊಡ್‌ವೆಸ್‌ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್‌ ನಾಯ್ಕ ತಿಳಿಸಿದರು.

‘ವಾಹನದಲ್ಲಿ ಎಂಬಿಬಿಎಸ್‌ ಆದ ಒಬ್ಬರು ವೈದ್ಯರು, ಡಿಪ್ಲೊಮಾ ನರ್ಸಿಂಗ್ ಆದ ಎರಡು ಶುಶ್ರೂಷಕಿಯರು, ಒಬ್ಬರು ಔಷಧ ವಿತರಕರು, ಒಬ್ಬರು ಪ್ರಯೋಗಾಲಯ ತಜ್ಞರು ಹಾಗೂ ಒಬ್ಬ ಸಹಾಯಕರು ಸಂಚಾರಿ ಆರೋಗ್ಯ ಘಟಕದಲ್ಲಿ ನಿರಂತರ ಸೇವೆ ಸಲ್ಲಿಸಲಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.