ADVERTISEMENT

‘ಜಿಲ್ಲೆಯ ಕೊಂಕಣಿ ಭಾಷಿಕರಿಗೆ ಅನ್ಯಾಯ’

ಉತ್ತರ ಕನ್ನಡ ಜಿಲ್ಲೆಗೆ ಸಿಗದ ಅಕಾಡೆಮಿ ಅಧ್ಯಕ್ಷ ಪಟ್ಟ, ಅಕಾಡೆಮಿಯಿಂದ ಜಿಲ್ಲೆಯ ಕಡೆಗಣನೆ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:51 IST
Last Updated 18 ಫೆಬ್ರುವರಿ 2017, 10:51 IST
ಕಾರವಾರ: ಕೊಂಕಣಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಗೆ ಈವರೆಗೆ ಕೊಂಕಣಿ ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷ ಸ್ಥಾನ ನೀಡದೇ ಕಡೆಗಣಿಸ ಲಾಗಿದೆ ಎಂದು ಅಕಾಡೆಮಿಯ ಸದಸ್ಯ ಡಾ.ಚೇತನ ನಾಯ್ಕ ಆರೋಪಿಸಿದರು. 
 
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಳೆದ 25 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕೊಂಕಣಿ ಭಾಷೆಯು ಸುಮಾರು 41 ಸಮುದಾಯ ಗಳನ್ನು ಒಳಗೊಂಡಿದ್ದು, ಈ ಪೈಕಿ 35 ಸಮುದಾಯ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈವರೆಗೆ ಕ್ರಿಶ್ಚಿಯನ್‌, ಗೌಡ ಸಾರಸ್ವತ ಬ್ರಾಹ್ಮಣ ಮತ್ತು ಖಾರ್ವಿ ಸಮುದಾಯದವರಿಗೆ ಮಾತ್ರ ಅಕಾಡೆಮಿ ಅಧ್ಯಕ್ಷ ಪಟ್ಟ ದೊರೆತಿದ್ದು, ಜಿಲ್ಲೆಯ ಯಾವೊಬ್ಬ ಕೊಂಕಣಿಗೂ ಅಧ್ಯಕ್ಷ ಸ್ಥಾನ ಲಭಿಸದಿರುವುದು ವಿಷಾದನೀಯ ಎಂದರು. 
 
ಸಮುದಾಯದ ಶೇ 75ರಷ್ಟು ಜನರು ಕೊಂಕಣಿ ಅಕಾಡೆಮಿ ನಡೆಸುವ ಕಾರ್ಯಕ್ರಮದಲ್ಲಿ ಈವರೆಗೂ ಪಾಲ್ಗೊಂಡಿಲ್ಲ. ಅಕಾಡೆಮಿಯ ಕೇಂದ್ರ ಸ್ಥಾನ ಮಂಗಳೂರು ಆಗಿರುವುದೇ ಇದಕ್ಕೆ ಕಾರಣ. ಕೇವಲ ಮೇಲು ಸಮುದಾಯದವರಿಗೆ ಮಣೆ ಹಾಕಲಾಗುತ್ತಿದೆ. ಕೊಂಕಣಿ ಭಾಷೆಯ ಅಭಿವೃದ್ಧಿಗೆ ಜಿಲ್ಲೆಯ ಅನೇಕ ಮಂದಿ ಶ್ರಮಿಸಿದ್ದಾರೆ. ಹೀಗಿರುವಾಗ ಕೊಂಕಣಿ ಭಾಷಿಕರು ಬೆರಳೆಣಿಕೆಯಷ್ಟಿರುವ ಮಂಗಳೂರಿನಲ್ಲಿ ಅಕಾಡೆಮಿಯನ್ನು ಸ್ಥಾಪಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 
 
ಕಾರವಾರ ಕೇಂದ್ರ ಸ್ಥಾನವಾಗಲಿ:  ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೇಂದ್ರ ಸ್ಥಾನ ಉತ್ತರ ಕನ್ನಡದ ಕಾರವಾರಕ್ಕೆ ಸ್ಥಳಾಂತರವಾಗಲಿ. ತುಳು ಭಾಷಿಕರು ಮಂಗಳೂರಿನಲ್ಲಿ ಅಧಿಕವಾಗಿರುವುದರಿಂದ ಅಲ್ಲಿ ತುಳು ಅಕಾಡೆಮಿ ಪ್ರಾರಂಭವಾಗಿದೆ. ಕೊಡವರು ಕೊಡಗಿನಲ್ಲಿ ಹೆಚ್ಚಿದ್ದಾರೆಂದು ಅಲ್ಲಿ ಕೊಡವ ಅಕಾಡೆಮಿ ಸ್ಥಾಪನೆಯಾಗಿದೆ. ಹಾಗೆಯೇ ಉತ್ತರ ಕನ್ನಡದಲ್ಲಿಯೂ ಕೊಂಕಣಿ ಭಾಷಿಕರು ಅಧಿಕ ಇದ್ದಾರೆ.
 
ನೆರೆ ರಾಜ್ಯ ಗೋವಾದಲ್ಲಿ ಕೊಂಕಣಿ ರಾಜ್ಯ ಭಾಷೆಯಾಗಿದ್ದು, ಕಾರವಾರ ಹಾಗೂ ಗೋವಾದ ನಡುವೆ ಕೊಂಕಣಿ ಭಾಷಿಕರು ಹೆಚ್ಚಿದ್ದಾರೆ. ಗೋವಾ ಹಾಗೂ ಕರ್ನಾಟಕದ ಗಡಿ ಪ್ರದೇಶವಾಗಿರುವ ಕಾರವಾರದಲ್ಲಿ ಜನರು ಸಾಮಾನ್ಯವಾಗಿ ಕೊಂಕಣಿ ಯಲ್ಲಿಯೇ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಕಾರವಾರಕ್ಕೆ ಅಕಾಡೆಮಿ ಬರಲಿ ಎಂದು ಆಗ್ರಹಿಸಿದರು. 
 
ಅಕಾಡೆಮಿಯ ಅಧ್ಯಕ್ಷರಿಗೆ ಸರ್ಕಾರ ತಿಂಗಳಿಗೆ ಸುಮಾರು ₹ 50 ಸಾವಿರ ಗೌರವ ಧನ ಪಾವತಿ ಮಾಡುತ್ತಿದ್ದು, ಸರ್ಕಾರದಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ಮಾತ್ರ ಯಾವ ಸೌಲಭ್ಯವೂ ಇಲ್ಲವಾಗಿದೆ. ಸಭೆ, ಸಮಾರಂಭಗಳಿಗೆ ಭಾಗವಹಿಸಲು ತೆರಳಿದರೆ ಅಲ್ಲಿ ಉಳಿದುಕೊಳ್ಳಲು ವಸತಿ ಸೌಕರ್ಯವಿಲ್ಲ, ಊಟ, ಉಪಾಹಾರದ ವ್ಯವಸ್ಥೆ ಕೂಡ ಇಲ್ಲವಾಗಿದೆ ಎಂದು ಕಿಡಿಕಾರಿದರು.
 
ರಾಜೇಶ ಮರಾಠಿ, ಪ್ರದೀಪ ನಾಯ್ಕ, ಎಂ.ಪಿ.ಕಾಮತ್, ಎಲ್.ಎಸ್. ಫರ್ನಾಂಡಿಸ್, ಸುನೀಲ್ ಸೋನಿ, ಸುಮಂಗಲ್ ನಾಯ್ಕ, ಎಂ.ಎಂ.ನಾಯ್ಕ ಉಪಸ್ಥಿತರಿದ್ದರು.
 
ಕೊಂಕಣಿ ಭವನ ಕಾರವಾರದಲ್ಲೇ ಸ್ಥಾಪನೆಯಾಗಲಿ: ಮಂಗಳೂರಿನಲ್ಲಿ ಕೊಂಕಣಿ ಭವನ ನಿರ್ಮಾಣ ಮಾಡಲು ಹುನ್ನಾರ ನಡೆದಿದ್ದು, ಈ ಭವನ ನಮ್ಮ ಜಿಲ್ಲೆಯ ಕಾರವಾರದಲ್ಲಿಯೇ ಸ್ಥಾಪನೆಯಾಗಬೇಕು. ಕೊಂಕಣಿ ಸಾಹಿತ್ಯ, ಭಾಷೆ, ಸಂಸ್ಕೃತಿ, ಪರಂಪರೆ, ಸಂಗೀತ, ಜಾನಪದ ಎಲ್ಲವನ್ನು ಮತ್ತೊಮ್ಮೆ ಬೆಳೆಸುವ ಪ್ರಯತ್ನ ಇಲ್ಲಿಂದಲೇ ನಡೆಯಬೇಕಿದೆ. ಕಾರವಾರಕ್ಕೆ ಕೊಂಕಣಿ ಭವನ ತರಲು ಹೋರಾಟಕ್ಕೂ ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ತಮ್ಮ ಶಾಸಕರನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಜಿಲ್ಲೆಯ ಕೊಂಕಣಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ ಎಂದು ಡಾ.ಚೇತನ ನಾಯ್ಕ ಹೇಳಿದರು.
 
* ಕೊಂಕಣಿ ಭಾಷೆ ಅಭಿವೃದ್ಧಿಗಾಗಿ ಸಾಕಷ್ಟು ದುಡಿದಿರುವ ನನಗೆ ಜಿಲ್ಲೆಯ ಜನತೆ ಸಹಕಾರ ನೀಡಿದರೆ ಕೊಂಕಣಿ ಅಕಾಡೆಮಿಯ ಅಧ್ಯಕ್ಷನಾಗಲು ಸಿದ್ಧ
-ಡಾ.ಚೇತನ ನಾಯ್ಕ, ಕೊಂಕಣಿ ಅಕಾಡೆಮಿಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.