ADVERTISEMENT

‘ದೂರು ಪಡೆದು ಕಾನೂನು ಕ್ರಮ ಕೈಗೊಳ್ಳಿ’

ದಲಿತ, ಮರಾಠಾ ಸಮಾಜದ ಮುಖಂಡರ ಜೊತೆ ಶಾಂತಿ ಪಾಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:42 IST
Last Updated 13 ಜುಲೈ 2017, 11:42 IST

ಹಳಿಯಾಳ: ‘ದೌರ್ಜನ್ಯ ಕಾಯ್ದೆ ದುರುಪ­ಯೋಗ ಪಡಿಸಿಕೊಂಡು ಸುಳ್ಳು ದೂರು ದಾಖಲಿಸಿಕೊಂಡರೆ ಸುಮ್ಮನಿರುವುದಿಲ್ಲ. ದಲಿತರಿಗೆ ಅನ್ಯಾಯವಾದಾಗ ನ್ಯಾಯ­ದಿಂದ ದೂರು ಪಡೆದು ಕಾನೂನು ಕ್ರಮ ಕೈಗೊಳ್ಳಿ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ದಲಿತ, ಮರಾಠಾ ಮತ್ತಿತರ ಸಮಾಜದ ಮುಖಂಡರ ಜೊತೆ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.

‘ತಾವು ಯಾವುದೇ ಜಾತಿಯ ವಿರುದ್ಧ ಈವರೆಗೂ ಮಾತನಾಡಿಲ್ಲ. ಕೆಲವೊಂದು ಅಧಿಕಾರಿಗಳು ಸಹ ದೌರ್ಜನ್ಯ ಕಾಯ್ದೆ ದಾಖಲಿಸಲು ಪ್ರಚೋ­ದನೆ ನೀಡುತ್ತಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿ ಜನರಿಂದ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ  ಅನ್ಯ ಕೋಮಿನವರ ಮೇಲೆ 8 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ’ ಎಂದರು.

ADVERTISEMENT

ಡಿವೈಎಸ್ಪಿ ದಯಾನಂದ ಪವಾರ ಮಾತನಾಡಿ, ‘ಪ್ರತಿಯೊಂದು ಹಳ್ಳಿಗಳಲ್ಲಿ ಸಮಸ್ಯೆ ಉಂಟಾದಾಗ ಗ್ರಾಮದ ಅಧಿ­ಕಾರಿ­ಗಳನ್ನು ಗ್ರಾಮಸ್ಥರು ಸಂಪರ್ಕಿಸಿರಿ. ಗ್ರಾಮೀಣ ಭಾಗದಲ್ಲಿ ಏನಾದರೂ ಘಟನೆ­ಯಾದಾಗ ಆ ಭಾಗದ ಮುಖಂಡರ ಜೊತೆಗೂಡಿ ರಾಜಿ ಮುಖಾ­ಂತರ ಇತ್ಯರ್ಥ ಪಡಿಸಲು ಪ್ರಯತ್ನಿಸಿರಿ. ಅನ್ಯಾಯಕ್ಕೊಳಗಾದಾಗ ದೂರನ್ನು ನೀಡಿ ಹೊರತು ತಮ್ಮ ತಮ್ಮಲ್ಲಿಯೇ ಪರಸ್ಪರ ವೈಷಮ್ಯವನ್ನು ಬೆಳೆಸಿಕೊಳ್ಳಬೇಡಿ’ ಎಂದರು.

ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಮಾತನಾಡಿದರು. ಮುಖಂಡರಾದ ರಾಜು ಧೂಳಿ, ಉಡಚಪ್ಪಾ ಬೋಬಾಟಿ, ಲಕ್ಷ್ಮಣ ಬಂಡಿವಾಡ, ರಾಜು ಮೇತ್ರಿ, ರಮೇಶ ಕೆಳಗಿನಮನಿ, ಅಣ್ಣಪ್ಪಾ ವಡ್ಡರ, ಮೇಘ­ರಾಜ ಮೇತ್ರಿ, ವಿ.ಬಿ.ರಾಮಚಂದ್ರ, ಬಸವರಾಜ ಮೇತ್ರಿ ಸಲಹೆ ನೀಡಿದರು.

ದಲಿತ ಸಂಘಟನೆಯ ಒಕ್ಕೂಟದ ವತಿಯಿಂದ  ದಲಿತರ ಮೇಲೆ ನಡೆಯು­ತ್ತಿರುವ ದೌರ್ಜನ್ಯ ಖಂಡಿಸಿ ಜುಲೈ 13 ರಂದು ಹಳಿಯಾಳದಲ್ಲಿ ನಡೆಸಲಿಚ್ಛಿಸಿದ್ದ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ­ಯನ್ನು ಮೊಟಕು­ಗೊಳಿಸಬೇಕೆಂದು ಸಭೆ­ಯಲ್ಲಿ ನಿರ್ಣಯಿಸಿ ಇದಕ್ಕೆ ಕೆಲ ದಲಿತ ಮುಖಂಡರು ಸಮ್ಮತಿ ಸೂಚಿಸಿ ಪ್ರತಿಭಟನೆ­ಯನ್ನು ಕೈಬಿಡಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀಟಾ ಸಿದ್ದಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ  ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಲಕ್ಷ್ಮಣರಾವ ಯಕ್ಕುಂಡಿ, ಜಿಲ್ಲಾ ವಕ್ಪ್‌ ಬೋರ್ಡ್‌ ಸಲಹಾ ಸಮಿತಿ ಅಧ್ಯಕ್ಷ ಮುಗದ ಖಯಾಂ,  ಶಿವಪುತ್ರಪ್ಪಾ ನುಚ್ಚಂಬ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.