ADVERTISEMENT

ನೋಟಿಸ್ ಜತೆ ಸಿ.ಎಂ. ಪತ್ರ!

ಸಾಲದ ಬಾಕಿ ಪಾವತಿಗೆ ಸಹಕಾರ ಸಂಘಗಳ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 10:27 IST
Last Updated 21 ಮಾರ್ಚ್ 2018, 10:27 IST

ಕಾರವಾರ: ಸಾಲದ ಬಾಕಿ ಪಾವತಿಸುವಂತೆ ಸಹಕಾರ ಸಂಘಗಳಿಂದ ನೀಡುವ ನೋಟಿಸ್‌ ಜತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶ ಇರುವ ಪತ್ರವೊಂದು ಜಿಲ್ಲೆಯ ರೈತರ ಮನೆ ತಲುಪುತ್ತಿದೆ.

ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲದಲ್ಲಿ ಗರಿಷ್ಠ ₹50 ಸಾವಿರ ಮನ್ನಾ ಮಾಡುವುದಾಗಿ 2017ರ ಜೂನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಇದೇ ಘೋಷಣೆ ಇರುವ ಪತ್ರವನ್ನು, ಸಾಲದ ಬಾಕಿ ಹೊಂದಿರುವ ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನ ರೈತರಿಗೆ ಇದೀಗ ನೀಡಲಾಗುತ್ತಿದೆ.

‘ರೈತರ ಕಷ್ಟವನ್ನು ಮನಗಂಡ ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಿದೆ. ಸಹಕಾರ ಸಂಸ್ಥೆಗಳಿಂದ ಅಲ್ಪಾವಧಿ ಕೃಷಿ ಸಾಲ ಪಡೆದು 2017ರ ಜೂನ್‌ 20ಕ್ಕೆ ಹೊರಬಾಕಿ ಹೊಂದಿರುವ ಎಲ್ಲ ರೈತರಿಗೂ ₹ 50 ಸಾವಿರದವರೆಗೆ ಸಾಲ ಮನ್ನಾ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ₹8,165 ಕೋಟಿ ಹೊರೆ ಬೀಳಲಿದೆ. ಆದರೂ ರೈತರ ಸಾಲದ ಋಣವನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರು ಇದರ ಸದುಪಯೋಗ ಪಡೆದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ
ಕೊಳ್ಳಬೇಕು’ ಎಂಬುದು ಪತ್ರದ ಒಕ್ಕಣೆ.

ADVERTISEMENT

‘ಈ ಹಿಂದೆ, ಎಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬ ಮಾಹಿತಿಯನ್ನು ಸರ್ಕಾರ ಕೇಳಿತ್ತು.  ಅದರಂತೆ ಮಾಹಿತಿ ನೀಡಿದಾಗ ಅಷ್ಟೇ ಪತ್ರಗಳನ್ನು ನಮಗೆ ಎರಡು ತಿಂಗಳ ಹಿಂದೆ ನೀಡಿದೆ.

ಸಾಲ ಮನ್ನಾ ತಿಳಿವಳಿಕೆ ಮೂಡಿಸುವುದಕ್ಕಾಗಿ ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ. ಸಾಲ ಬಾಕಿ ಇರುವ ರೈತರಿಗೆ ನೋಟಿಸ್ ಕಳಿಸುವ ವೇಳೆ ಅದರ ಜತೆ ಈ ತಿಳಿವಳಿಕೆ ಪತ್ರವನ್ನು ನೀಡುತ್ತಿದ್ದೇವೆ’ ಎಂದು ಸಹಕಾರ ಸಂಸ್ಥೆಯೊಂದರ ವ್ಯವಸ್ಥಾಪಕರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.