ADVERTISEMENT

ಪಕ್ಷ ಸಂಘಟನೆಗೆ ಆದ್ಯತೆ ನೀಡಿ: ಮರಿತಿಬ್ಬೇಗೌಡ

​ಪ್ರಜಾವಾಣಿ ವಾರ್ತೆ
Published 26 ಮೇ 2017, 9:39 IST
Last Updated 26 ಮೇ 2017, 9:39 IST

ಶಿರಸಿ: ‘ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಖ್ಯೆ ಸಾಕಷ್ಟಿದ್ದರೂ ಸಂಘಟನೆ ವ್ಯವಸ್ಥಿತವಾಗಿಲ್ಲ. ಹೀಗಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕಾರ್ಯಕರ್ತರು, ಪ್ರಮುಖರು ಆದ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ತಿಳಿಸಿದರು. ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶಿರಸಿ–-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜೆಡಿಎಸ್ ಕಾರ್ಯಕರ್ತರ ಸಂಖ್ಯೆ ಬಲಗೊಂಡಿದೆ. ಆದರೆ ಪಕ್ಷದ ನೆಲೆಗಟ್ಟಿನಲ್ಲಿ ಒಗ್ಗೂಡುವ ಕಾರ್ಯವಾಗುತ್ತಿಲ್ಲ. ಪ್ರತಿಯೊಬ್ಬರೂ ಪಕ್ಷದ ನೆಲೆಯಲ್ಲಿ ಒಂದಾಗಬೇಕಾದ ಅಗತ್ಯ’ ಇದೆ ಎಂದರು.

‘ಜಿಲ್ಲೆಯಲ್ಲಿ ಉಸುಕಿದ್ದರೂ ಇಲ್ಲಿಯ ಜನತೆಗೆ ಉಸುಕಿನ ಅಭಾವವಾಗಿದೆ. ಬರ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮೇಲೆ, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆಪಾದನೆ ಮಾಡುತ್ತಾ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಕಾರಣ ಎಲ್ಲಾ ವರ್ಗದವರ ಅನುಕೂಲಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರುವಂತಾಗಬೇಕು. ಅದಕ್ಕಾಗಿ ನಾವೆಲ್ಲರು ಸಂಘಟನೆ ಆಗಬೇಕು. ಮುಂದಿನ ದಿನಗಳಲ್ಲಿ ಜೆಡಿಎಸ್‌ನ ಪ್ರಮುಖ ನಾಯಕರು ಜಿಲ್ಲಾ ಪ್ರವಾಸ ಕೈಗೊಳ್ಳುವ ಮೂಲಕ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಗೆಲ್ಲುವ ಪ್ರಯತ್ನ ನಡೆಸಲಾಗುವುದು’ ಎಂದರು.

ADVERTISEMENT

ಶಿರಸಿ ವಿಧಾನಸಭಾ ಕ್ಷೇತ್ರದ ವಿವಿಧ ಘಟಕದ ಬೂತ್, ಹೋಬಳಿ ಹಾಗೂ ತಾಲ್ಲುಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಕೀಲ ಯೋಗೇಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತ್ರಿವೇಣಿ ಗೌಡ, ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ಜಿ.ನಾಯ್ಕ, ನಗರ ಘಟಕದ ಅಧ್ಯಕ್ಷ ಜುಬೇರ ಜುಕಾಕೋ, ನಗರ ಪ್ರಧಾನ ಕಾರ್ಯದರ್ಶಿ ಶೇಖರ ಪೂಜಾರಿ, ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಪ್ರಮುಖರಾದ ಆನಂದ ಗೌಡ, ರಾಜೇಶ್ವರಿ ಹೆಗಡೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.