ADVERTISEMENT

ಪ್ರಥಮ ಬಾರಿಗೆ ‘ಫ್ಲೈ ಫಿಶ್’ ಕ್ರೀಡೆ ಆರಂಭ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:07 IST
Last Updated 15 ಮೇ 2017, 7:07 IST
ಕಾರವಾರ ಕೋಡಿಬಾಗದ ‘ಕಾಳಿ ರಿವರ್‌ ಗಾರ್ಡನ್‌’ನಲ್ಲಿ ಪರಿಚಯಿಸಿರುವ ‘ಫ್ಲೈ ಫಿಶ್’ ಕ್ರೀಡೆ
ಕಾರವಾರ ಕೋಡಿಬಾಗದ ‘ಕಾಳಿ ರಿವರ್‌ ಗಾರ್ಡನ್‌’ನಲ್ಲಿ ಪರಿಚಯಿಸಿರುವ ‘ಫ್ಲೈ ಫಿಶ್’ ಕ್ರೀಡೆ   

ಕಾರವಾರ: ಪ್ರವಾಸಿಗರ ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿರುವ ಇಲ್ಲಿನ ಕೋಡಿ ಬಾಗದ  ‘ಕಾಳಿ ರಿವರ್‌ ಗಾರ್ಡನ್‌’ನಲ್ಲಿ ಕರಾವಳಿ ಕರ್ನಾಟಕದಲ್ಲೇ ಮೊದಲು ಎಂಬಂತೆ ವಿಶೇಷ ‘ಫ್ಲೈ ಫಿಶ್’ ಎಂಬ ಜಲಸಾಹಸ ಕ್ರೀಡೆಯನ್ನು ಪ್ರಾರಂಭಿಸಲಾಗಿದೆ.

ಮಂಗಳೂರಿನ ಲೀಸರ್ ರೂಟ್ಸ್‌ ಎನ್ನುವ ಸಂಸ್ಥೆಯು ಕಾಳಿ ನದಿ ತಟದ 2 ಎಕರೆ ಪ್ರದೇಶದಲ್ಲಿ ಸುಮಾರು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಉದ್ಯಾನದಲ್ಲಿ ವಿದ್ಯುತ್‌ ದ್ವೀಪ, ಅಲಂಕಾರಿಕ ಗಿಡಗಳು, ಮಕ್ಕಳ ಆಟಿಕೆ, ಬಣ್ಣ ಬಣ್ಣದ ಬೆಳಕಿನ ಕಾರಂಜಿ ಅದಾ ಗಲೇ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಪ್ರಾರಂಭಗೊಂಡಿರುವ ‘ಫ್ಲೈಯಿಂಗ್ ಫಿಶ್’ ಕ್ರೀಡೆ ಜನತೆಗೆ ಹೊಸದಾಗಿದ್ದು, ವಿಶೇಷ ಅನುಭವ ನೀಡಲಿದೆ.

ಏನಿದು ‘ಫ್ಲೈ ಫಿಶ್’?: ‘ಫ್ಲೈ ಫಿಶ್’ ಒಂದು ರೋಮಾಂಚನ ಹಾಗೂ ವಿಶೇಷ ಅನು ಭವ ನೀಡುವ ಜಲಸಾಹಸ ಕ್ರೀಡೆಗಳಲ್ಲಿ ಮೊದಲಿನದಾಗಿದೆ. ಇದಕ್ಕಾಗಿ ಮೀನಿ ನಂತೆ ಹೋಲುವ ರಬ್ಬರ್ ದೋಣಿ ಯನ್ನು ಬಳಕೆ ಮಾಡಲಾಗುತ್ತದೆ. ಅದನ್ನು 1,500 ಎಚ್‌ಪಿ ಸಾಮರ್ಥ್ಯದ ಜೆಟ್‌ ಸ್ಕೀ ಬೋಟ್‌ಗೆ ದಾರ ಕಟ್ಟಿ ನೀರಿನಲ್ಲಿ ವೇಗವಾಗಿ ಎಳೆಯಲಾಗುತ್ತದೆ. ವೇಗದ ರಭಸಕ್ಕೆ ದೋಣಿಯು ಗಾಳಿಯ ವಿರುದ್ಧವಾಗಿ ನೀರಿನ ಮೇಲೆಯೇ ಹಾರಲಾರಂಭಿಸುತ್ತದೆ.

ADVERTISEMENT

ಬೋಟ್‌ನ ವೇಗ ಹೆಚ್ಚಿದಂತೆ ಮೀನು ಜಿಗಿಯುವಂತೆ ದೋಣಿ ಹಾರುತ್ತದೆ. ಮಾರ್ಗದರ್ಶಕರೊಂದಿಗೆ ಒಟ್ಟೂ ಮೂವರು ಈ ದೋಣಿಯಲ್ಲಿ ಸಾಹಸದ ಅನುಭವ ಪಡೆಯಬಹುದಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಇದರಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಒಂದು ಬಾರಿಯ ಪ್ರಯಾಣಕ್ಕೆ ₹ 1,000 ನಿಗದಿಪಡಿಸಲಾಗಿದೆ. ಪ್ರಯಾಣಿಸುವ ಸಂದರ್ಭ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸುರಕ್ಷತಾ ಸಾಧನಗಳನ್ನು ಇಲ್ಲಿ ಒದಗಿಸಲಾಗುತ್ತದೆ.

‘ಆಲ್ ಇನ್ ಒನ್’ ತಾಣ: ‘ಉದ್ಯಾನ ದಲ್ಲಿ ಕಳೆದ ಹದಿನೈದು ದಿನಗಳಿಂದ ಬನಾನಾ ಬೋಟ್‌, ಬಂಪ್‌ ರೈಡ್‌, ಜೆಟ್‌ ಸ್ಕೀ, ಕಯಾಕಿಂಗ್‌ ಮುಂತಾದ ಜಲ ಸಾಹಸ ಚಟುವಟಿಕೆಗಳನ್ನು ಆರಂಭಿಸ ಲಾಗಿದೆ. ಸ್ಥಳೀಯರನ್ನು ಹೊರತುಪಡಿಸಿ ರಾಜ್ಯದ ಬೆಳಗಾವಿ, ಮಂಗಳೂರು ಹಾಗೂ  ನೆರೆಯ ಗೋವಾ, ಮಹಾರಾಷ್ಟ್ರ, ರಾಜಸ್ಥಾನದಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಜಲಸಾಹಸ ಕ್ರೀಡೆಗಳಲ್ಲಿ ಎಲ್ಲವೂ ಇಲ್ಲಿ ಲಭ್ಯವಿರುವುದರಿಂದ ಇದೊಂದು ‘ಆಲ್ ಇನ್ ಒನ್’ ತಾಣ ಆಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುತ್ತಾರೆ ಲೀಸರ್‌ ರೂಟ್ಸ್‌ ಸಂಸ್ಥೆಯ ಮಾಲೀಕ ರೋಶನ್‌ ಪಿಂಟೋ.

‘ಉದ್ಯಾನದೊಳಗೆ ಫುಡ್‌ಕೋರ್ಟ್‌ ಕೂಡ ಸದ್ಯದಲ್ಲೇ ನಿರ್ಮಾಣಗೊಳ್ಳ ಲಿದ್ದು, ವಾಹನಗಳ ನಿಲುಗಡೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಸುರಕ್ಷತೆಗೆ ಸಿಸಿ ಟಿವಿ ಕಣ್ಗಾವಲನ್ನು ಸಹ ಇಡಲಾಗಿದೆ. ಉದ್ಯಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಹಾಗೂ ಹೊಸತನವನ್ನು ಅಳವಡಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.

*

‘ಕಾಳಿ ರಿವರ್‌ ಗಾರ್ಡನ್‌’ ಗೋವಾ ಬೀಚ್‌ಗಿಂತಲೂ ಸಾಕಷ್ಟು ಮನರಂಜನೆ ನೀಡುತ್ತದೆ. ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಮತ್ತಷ್ಟು ಪ್ರವಾಸಿಗರು ಬರಲಿದ್ದಾರೆ
ಶಾಹಿದಾ ಅತ್ತರ್
ಗೋವಾ  ಮೂಲದ ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.