ADVERTISEMENT

ಬಿರು ಬೇಸಿಗೆಯಲ್ಲಿ ಬಂಪರ್ ಬೆಳೆ

ಯಡೂರ್‌ಬೈಲ್‌ನಲ್ಲಿ ಕಡಿಮೆ ನೀರುಣಿಸಿ ಕಲ್ಲಂಗಡಿ ಬೆಳೆಸಿರುವ ರೈತರು: ಜಲಕ್ಷಾಮಕ್ಕೆ ಸವಾಲು!

ಸಂಧ್ಯಾ ಹೆಗಡೆ
Published 22 ಮಾರ್ಚ್ 2017, 9:00 IST
Last Updated 22 ಮಾರ್ಚ್ 2017, 9:00 IST
ಶಿರಸಿ ತಾಲ್ಲೂಕಿನ ಯಡೂರ್‌ಬೈಲ್‌ನಲ್ಲಿ ರೈತರು ಬೆಳೆಸಿರುವ ಕಲ್ಲಂಗಡಿ
ಶಿರಸಿ ತಾಲ್ಲೂಕಿನ ಯಡೂರ್‌ಬೈಲ್‌ನಲ್ಲಿ ರೈತರು ಬೆಳೆಸಿರುವ ಕಲ್ಲಂಗಡಿ   

ಶಿರಸಿ: ಬೆಂಕಿ ಉಗುಳುವ ಬಿರು ಬೇಸಿಗೆಗೆ ನಲುಗಿರುವ ಸಾವಿರಾರು ಎಕರೆ ಕೃಷಿ ಭೂಮಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಪಾಳುಬಿದ್ದಿದೆ. ಈ ಬರಡು ಭೂಮಿಯ ನಡುವೆ ಕ್ಯಾನ್ವಾಸ್‌ನಲ್ಲಿ ಬರೆದ ಚಿತ್ರದಂತೆ ಕಲ್ಲಂಗಡಿ ಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವ ದೃಶ್ಯ ಯಡೂರ್‌ಬೈಲ್‌ನಲ್ಲಿ ಕಾಣಸಿಗುತ್ತದೆ.

ಜಲಕ್ಷಾಮವನ್ನು ಸವಾಲಾಗಿ ಸ್ವೀಕರಿಸಿರುವ ಯಡೂರ್‌ಬೈಲಿನ ಐವರು ರೈತರು ಭತ್ತ ಬೆಳೆಯುವ 15 ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. ಬಳ್ಳಿ ತುಂಬ ಇರುವ ಪುಟ್ಟ ಕಾಯಿಗಳು ಇನ್ನು 15 ದಿನಕ್ಕೆ ಕೊಯ್ಲಿಗೆ ಬರಲಿವೆ.

‘ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಶಶಿಧರ ಮುಳಗುಂದ ಅವರು ನಾಲ್ಕಾರು ರೈತರನ್ನು ತುಮಕೂರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ರೈತರು ಇಂಟರನಲ್‌ ಡ್ರಿಪ್ ಅಳವಡಿಸಿ, ಮೇಲೆ ಮಲ್ಚಿಂಗ್ ಮಾಡಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುತ್ತಿದ್ದರು. ಇದನ್ನು ನೋಡಿ ಬಂದ ನಾವು ನಮ್ಮ ಗದ್ದೆಯಲ್ಲಿ ಪ್ರಯೋಗ ಮಾಡಿದೆವು. ಬಂಪರ್ ಇಳುವರಿ ಬಂತು’ ಎನ್ನುತ್ತಾರೆ ಕಲ್ಲಂಗಡಿ ಬೆಳೆಗಾರ ಸುಧಾಮ ಬೇಗಣ್ಣ ಮರೇರ್.

‘ಇಂಟರ್‌ನಲ್ ಡ್ರಿಪ್ ಅಳವಡಿಸಲು ಎಕರೆಗೆ ಅಂದಾಜು ₹ 40ಸಾವಿರ ವೆಚ್ಚ ತಗಲುತ್ತದೆ. ಒಮ್ಮೆ ಖರೀದಿಸಿದ ಪೈಪ್‌, ಇತರ ಸಲಕರಣೆಗಳನ್ನು ಜತನದಿಂದ ಇಟ್ಟುಕೊಂಡರೆ ಆರೆಂಟು ವರ್ಷ ಉಳಿಸಿಕೊಳ್ಳಬಹುದು. ಆದರೆ ಬೆಳೆಗೆ ಪ್ಲಾಸ್ಟಿಕ್ ಮಲ್ಚಿಂಗ್ ಮಾತ್ರ ಪ್ರತಿ ವರ್ಷ ಮಾಡಬೇಕು. ಇದಕ್ಕೆ ₹4 ಸಾವಿರ ಖರ್ಚಾಗುತ್ತದೆ’ ಎನ್ನುತ್ತಾರೆ ಅವರು.

ಇಳುವರಿ ಅಧಿಕ: ‘ಕಲ್ಲಂಗಡಿ ಎರಡೂ ವರೆ ತಿಂಗಳ ಬೆಳೆ. ಗದ್ದೆಯಲ್ಲಿ ಈಗ ಬೆಳೆದಿರುವ ಕಾಯಿ ಬಲಿಯುವ ಹಂತ ದಲ್ಲಿದೆ. ವರದಾ ನದಿಯಲ್ಲಿ ಅಲ್ಲಲ್ಲಿ ಗುಂಡಿಯಲ್ಲಿರುವ ನೀರನ್ನು ಬಳಸಿ ಕೊಂಡು ಗದ್ದೆಗೆ ಹಾಯಿಸುತ್ತೇವೆ. ಕಲ್ಲಂಗಡಿ ನಡುವೆ ಮನೆ ಬಳಕೆಗೆಂದು ಮೆಣಸು, ಸವತೆಬಳ್ಳಿ, ಮಗೆಬಳ್ಳಿಗಳನ್ನು ಬೆಳೆಸಿದ್ದೇವೆ. ಇಂಟರ್‌ನಲ್ ಡ್ರಿಪ್ ಇದ್ದರೆ ಕಡಿಮೆ ನೀರು ಸಾಕು ಮತ್ತು ಇಡೀ ಗದ್ದೆಗೆ ಒಂದೇ ಬಾರಿ ನೀರನ್ನು ಹಾಯಿಸಬಹುದು.

ಬೆಳೆಗೆ ಗೊಬ್ಬರ, ಔಷಧ ಗಳನ್ನು ಡ್ರಿಪ್ ಮೂಲಕವೇ ನೀಡುವು ದರಿಂದ ಹೆಚ್ಚು ಕೆಲಸಗಾರರು ಬೇಕಾಗು ವುದಿಲ್ಲ. ಮಲ್ಚಿಂಗ್ ಮಾಡಿದರೆ ಬೆಳೆಗೆ ರೋಗ ಕಡಿಮೆ. ಸಾದಾ ಗದ್ದೆಯಲ್ಲಿ ಎಕರೆಗೆ ಸರಾಸರಿ 10 ಟನ್ ಇಳುವರಿ ಬಂದರೆ ಈ ವ್ಯವಸ್ಥೆಯಲ್ಲಿ 15–20 ಟನ್ ಇಳುವರಿ ಪಡೆಯಬಹುದು’ ಎಂದರು ಬೆಳಗಾರ ಉದಯಕುಮಾರ್.

‘ಬೆಳೆ ಕೈಗೆ ಬರುವಷ್ಟರಲ್ಲಿ ಎಕರೆ ₹50ಸಾವಿರ ಖರ್ಚಾಗುತ್ತದೆ. ಪ್ರತಿ ಟನ್‌ಗೆ ₹7–8ಸಾವಿರ ಬೆಲೆ ಸಿಕ್ಕಿದರೆ ಮಾತ್ರ ಬೆಳೆಗಾರನಿಗೆ ಲಾಭ. ನಮಗೆ ಇಲ್ಲಿ ಮಾರುಕಟ್ಟೆ ದೊಡ್ಡ ಸಮಸ್ಯೆಯಾಗಿದೆ.

ಮಧ್ಯವರ್ತಿಗಳು ಬಂದು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ವ್ಯಾಪಾರ ಸ್ಥರಿಗೆ ನೀಡುತ್ತಾರೆ. ಸರಿಯಾದ ಮಾರು ಕಟ್ಟೆ ದೊರೆತರೆ ಬೆಳೆಯುವ ಪ್ರದೇಶವನ್ನು ವಿಸ್ತರಿಸಿ ಕಷ್ಟಪಟ್ಟು ದುಡಿಯಲು ನಾವು ಅಂಜುವುದಿಲ್ಲ’ ಎನ್ನುತ್ತಾರೆ ಗೋವರ್ದನ ಕಲ್ಯಾಣಕರ. ನಾಗರಾಜ ಕೆಳಗಿನಮನೆ.

ADVERTISEMENT

*
ತೋಟಗಾರಿಕಾ ಇಲಾಖೆ ಕಲ್ಲಂಗಡಿ ಬೆಳೆಯಲು ಇಂಟರ್‌ನಲ್ ಡ್ರಿಪ್‌ಗೆ ಸಹಾಯಧನ ಒದಗಿಸುವ ಜೊತೆಗೆ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
-ಮಹಾದೇವ ಬಂಡೇರ,
ಕಲ್ಲಂಗಡಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.