ADVERTISEMENT

ಬೆಂಗಳೂರಿನಲ್ಲಿ ಹೆಗಡೆ ಪುತ್ಥಳಿ ಸ್ಥಾಪನೆಯಾಗಲಿ

ಶಿರಸಿಯಲ್ಲಿ ನಡೆದ ರಾಮಕೃಷ್ಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:28 IST
Last Updated 13 ಜನವರಿ 2017, 6:28 IST
ಶಿರಸಿ: ರಾಜ್ಯದ ರಾಜಧಾನಿ ಬೆಂಗಳೂ ರಿನ ಯೋಗ್ಯ ಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಆಗ್ರಹಿಸಿದರು. 
 
ರಾಮಕೃಷ್ಣ ಹೆಗಡೆ ಪುಣ್ಯತಿಥಿ ಅಂಗವಾಗಿ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆ ಗುರುವಾರ ಇಲ್ಲಿ ಆಯೋಜಿಸಿದ್ದ ಸಂಸ್ಮರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ‘ಬೆಂಗಳೂರಿನಲ್ಲಿ ಯಾರ್‌ಯಾರೋ ಸಣ್ಣಪುಟ್ಟ ವ್ಯಕ್ತಿಗಳ ಪುತ್ಥಳಿ ಸ್ಥಾಪನೆ ಮಾಡಲಾಗುತ್ತದೆ. ಆದರೆ ರಾಜ್ಯದ ಮಹಾನ್ ಶಕ್ತಿಯಾಗಿದ್ದ ರಾಮಕೃಷ್ಣ ಹೆಗಡೆ ನೆನೆಯುವ ಕಾರ್ಯವಾಗುತ್ತಿಲ್ಲ. ಹೆಗಡೆಯವರ ಉಪಕಾರ ಪಡೆದು ಬೆಂಗಳೂರು ಸೇರಿರುವ ಅನೇಕ ರಾಜಕೀಯ ನಾಯಕರು ಪ್ರಸ್ತುತ ಅಧಿಕಾರದ ಮುಂಚೂಣಿಯಲ್ಲಿದ್ದಾರೆ. ಆದರೆ ಯಾರೊಬ್ಬರೂ ಹೆಗಡೆ ಅವರ ಸ್ಮರಣೆ ಮಾಡಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 
 
‘ಸಚಿವ ಆರ್‌.ವಿ. ದೇಶಪಾಂಡೆ ಇಂದು ದೊಡ್ಡ ವ್ಯಕ್ತಿಯಾಗಿದ್ದಾರೆ. ಹೆಗಡೆ ಜೀವಂತವಾಗಿದ್ದಾಗ ದೇಶಪಾಂಡೆ ಸಣ್ಣ ವ್ಯಕ್ತಿಯಾಗಿದ್ದರು. ಹೆಗಡೆ ಭೇಟಿ ಅವರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಆಗ ಸಿದ್ದರಾಮಯ್ಯ ಸಹ ಏನೂ ಆಗಿರಲಿಲ್ಲ. ಹೆಗಡೆ ಪಕ್ಷದಲ್ಲಿದ್ದ ಅವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಹೆಗಡೆ ನೆನಪಿಸಿಕೊಳ್ಳಬೇಕೆಂದು ಅವರಿಗೆ ಇಂದಿಗೂ ಅನ್ನಿಸಲಿಲ್ಲ’ ಎಂದು ಹೇಳಿದರು. 
 
‘ಹೆಗಡೆ ವಿಧಿವಶರಾಗಿ ಒಂದು ತಿಂಗಳೊಳಗೆ ಅವರ ಪತ್ನಿ ಶಕುಂತಲಾ ಹೆಗಡೆ ಅವರನ್ನು ಅಂದು ಭೇಟಿ ಮಾಡಿದ ಇಂದಿನ ಕೇಂದ್ರ ನಗರಾಭಿ ವೃದ್ಧಿ ಸಚಿವರು ತಮ್ಮ ಪಕ್ಷದಿಂದ ಟಿಕೆಟ್ ಕೊಡುವುದಾಗಿ ಹೇಳಿ ಆಯ್ಕೆಯಾಗಿ ಬರಲು ಸಾಧ್ಯವಾಗದಂತಹ ಸ್ಥಾನವನ್ನು ಅವರಿಗೆ ಕೊಟ್ಟರು. ಸೋತ ಮೇಲೆ ಅವರನ್ನು ಮಾತನಾಡಿಸಲೂ ಬರಲಿಲ್ಲ. ನಾನು ಅವರ ಮನೆಗೆ ಹೋದಾಗ ಈ ಸಂಗತಿಯನ್ನು ಶಕುಂತಲಾ ಅಳುತ್ತ ನನ್ನ ಬಳಿ ಹೇಳಿದ್ದರು. ಸ್ವಾರ್ಥವೇ ಪ್ರಧಾನ ವಾಗುತ್ತಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರಂಥ ಭರವಸೆಯ ನಾಯಕರು ಭವಿಷ್ಯದಲ್ಲಿ ಸಿಗುವುದು ಸಹ ಅನುಮಾನವಾಗಿದೆ’ ಎಂದು ಕೇಂದ್ರ ಸಚಿವರ ಹೆಸರು ಉಲ್ಲೇಖಿಸದೇ ಪಾಟೀಲ ಪುಟ್ಟಪ್ಪ ಹಳೆಯ ಘಟನೆ ನೆನಪಿಸಿದರು. 
 
ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಅಭಿಮಾನಿ ವೇದಿಕೆಯ ಪ್ರಮೋದ ಹೆಗಡೆ, ಎನ್.ಪಿ. ಗಾಂವಕರ ಇದ್ದರು. 
 
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶುದ್ಧ ರಾಜಕೀಯ ಚಾರಿತ್ರ್ಯ ಹೊಂದಿದವರು ಅಪ್ರಸ್ತುತ ರಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಮೌಲ್ಯಯುತ ರಾಜಕಾರಣಕ್ಕೆ ಅನ್ವರ್ಥಕ ವಾಗಿದ್ದ ರಾಮಕೃಷ್ಣ ಹೆಗಡೆ ಅವರ ಆದರ್ಶ ಮತ್ತಷ್ಟು ಅರ್ಥಪೂರ್ಣವಾಗಿ ಕಾಣುತ್ತದೆ ಎಂದು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು. 
 
ಹೆಗಡೆಯವರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಜಿಲ್ಲಾ ಪರಿಷತ್‌ನ ಮೊದಲ ಅಧ್ಯಕ್ಷರಾಗಿದ್ದ ಅವರು ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇಶದ ಪ್ರಧಾನಮಂತ್ರಿಯಾಗುವ ವರ್ಚಸ್ಸು ಹೊಂದಿದ್ದ ರಾಮಕೃಷ್ಣ ಹೆಗಡೆ  ಅಧಿಕಾರಕ್ಕಾಗಿ ಲಾಬಿ ಮಾಡಲಿಲ್ಲ. ಸಾಮಾನ್ಯ ಕಾರ್ಯಕರ್ತರನ್ನು ಸಹ ಹೆಗಡೆ ಆಪ್ತವಾಗಿ ಕಾಣುತ್ತಿದ್ದರು. ಆದರೆ ಇಂದಿನ ರಾಜಕೀಯ ಪರಿಸ್ಥಿತಿ ತುಂಬ ಬದಲಾಗಿದೆ ಎಂದರು.
 
ಪತ್ರಕರ್ತ ವಿಶ್ವೇಶ್ವರ ಭಟ್ಟ ಮಾತನಾಡಿ, ಚುನಾವಣೆ ಪ್ರಕ್ರಿಯೆ ಇಲ್ಲದೇ ನಾಯಕರ ಒಮ್ಮತದಿಂದ ಅವಿರೋಧವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದ ರಾಜಕಾರಣಿ ರಾಮಕೃಷ್ಣ ಹೆಗಡೆ ಎಂದರು. 
 
‘ರಾಮಕೃಷ್ಣ ಹೆಗಡೆ ಅವರ ಮರಣದಿಂದ ಸಮಾಜ, ಪ್ರಜಾಪ್ರಭುತ್ವ ಹಾಗೂ ದೇಶಕ್ಕೆ ದ್ರೋಹವಾಗಿದೆ. ಅವರ ಚಿಂತನೆ, ಯೋಚನೆ, ಮೌಲ್ಯಯುತ ಆಡಳಿತ ವೈಖರಿಯ ಅಗತ್ಯತೆ ಸಮಾಜಕ್ಕೆ ಇನ್ನೂ ಇತ್ತು’ ಎಂದು ಅಭಿಮಾನಿ ವೇದಿಕೆಯ ಪ್ರಮೋದ ಹೆಗಡೆ ಹೇಳಿದರು. 
 
ವಕೀಲ ಬಿ.ಡಿ. ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಸಾಮಾಜಿಕ ಮುಖಂಡರಾದ ಶಶಿಭೂಷಣ ಹೆಗಡೆ, ಆರ್‌.ಎಂ. ಹೆಗಡೆ ಇದ್ದರು. ವೇದಿಕೆ ಖಜಾಂಚಿ ಎನ್‌.ಪಿ. ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಹೆಗಡೆ ಹೊಸಬಾಳೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. 
 
**
ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ವರು ಸಹ ರಾಮಕೃಷ್ಣ ಹೆಗಡೆ ಅವರನ್ನು ನಮ್ಮ ನಾಯಕರು ಎನ್ನುತ್ತಾರೆ. ಅಂತಹ ವ್ಯಕ್ತಿತ್ವ ಹೆಗಡೆಯವರದಾಗಿತ್ತು.
-ಪಾಟೀಲ ಪುಟ್ಟಪ್ಪ
ಹಿರಿಯ ಪತ್ರಕರ್ತ 

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.