ADVERTISEMENT

ಮನೆ ನಿರ್ಮಾಣ ಈಗ ಇನ್ನೂ ಸುಲಭ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:51 IST
Last Updated 15 ಜುಲೈ 2017, 9:51 IST

ಶಿರಸಿ: ವಸತಿ ಯೋಜನೆಗಳ ಮನೆ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಕಾರ ಪಡೆಯಲು ಗ್ರಾಮೀಣಾಭಿವೃದ್ಧಿ ಇಲಾಖೆ ಅವಕಾಶ ಕಲ್ಪಿಸಿದೆ. ಈ ಕುರಿತು ತಾಲ್ಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಇಲಾಖೆ ಸುತ್ತೋಲೆ ಕಳುಹಿಸಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿ ಸರ್ಕಾರದ ಯಾವುದೇ ವಸತಿ ಯೋಜನೆಗಳಲ್ಲಿ ಅಕುಶಲ ಕಾರ್ಯಗಳಿ ಗಾಗಿ 90 ಮಾನವ ದಿನವನ್ನು ನರೇಗಾ ಮೂಲಕ ನೀಡಲಾಗುತ್ತದೆ. ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 2017–18ರಲ್ಲಿ 5 ಲಕ್ಷ ಮನೆ ನಿರ್ಮಿಸುವ ಗುರಿಯನ್ನು ವಸತಿ ಇಲಾಖೆ ಹೊಂದಿದೆ.

ಇಷ್ಟು ಸಂಖ್ಯೆಯ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಅಕುಶಲ ಕೂಲಿ ಕಾರ್ಮಿಕರ ಕೊರತೆಯನ್ನು ನರೇಗಾ ಮೂಲಕ ನೀಗಿಸಲು ಇಲಾಖೆ ನಿರ್ಧರಿಸಿದೆ. ತಳಮಟ್ಟದವರೆಗೆ ಮೊದಲ ಹಂತದಲ್ಲಿ 28 ದಿನಕ್ಕೆ ವೆಚ್ಚವನ್ನು ಪಾವತಿಸಲಾಗುತ್ತದೆ.

ADVERTISEMENT

ತಳಪಾಯದಿಂದ ಲಿಂಟಲ್ ಮಟ್ಟದವರೆಗೆ ಎರಡನೇ ಹಂತಕ್ಕೆ 24 ದಿನ, ಲಿಂಟಲ್ ಮಟ್ಟದಿಂದ ಚಾವಣಿವರೆಗೆ ಮೂರನೇ ಹಂತದಲ್ಲಿ 10 ದಿನ ಮತ್ತು ಚಾವಣಿಯಿಂದ ಮನೆ ಪೂರ್ಣಗೊಳ್ಳುವವರೆಗೆ 28 ಮಾನವ ದಿನಗಳ ವೆಚ್ಚ ನೀಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಇ- ಮಸ್ಟರ್ಡ್‌ ರೋಲ್: ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶದ ಜೊತೆಗೆ ನರೇಗಾ ಯೋಜನೆಯ ಇ- ಮಸ್ಟರ್ಡ್‌ ರೋಲ್‌ಗಳನ್ನು (ಇ.ಎನ್.ಎಂ.ಆರ್) ನೀಡಲಾಗುತ್ತದೆ. ಮನೆಗಳ ನಿರ್ಮಾಣ ಹಂತ ಮತ್ತು ಬೇಡಿಕೆಯನ್ನು ಆಧರಿಸಿ ಇ.ಎನ್.ಎಂ.ಆರ್ ನೀಡಬೇಕು.

ಫಲಾ­ನು­ಭವಿಗಳು ಕಾಮಗಾರಿಯನ್ನು ಆರಂಭಿಸ­ದಿದ್ದರೆ ಅಧಿಕಾರಿಗಳು ಕೂಡಲೇ ಇದನ್ನು ರದ್ದುಪಡಿಸಬೇಕು. ಪ್ರಗತಿಯಲ್ಲಿ ಯಾವುದೇ ಕಾರಣಕ್ಕೂ ಕುಂಠಿತವಾಗಬಾರದು. ಪ್ರತಿ ವಾರ ಪ್ರಗತಿ ಪರಿಶೀಲನೆ ಮಾಡಿ ಮೇಲಧಿಕಾರಿಗಳಿಗೆ ವರದಿ ನೀಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕಾಮಗಾರಿಗೆ ವೇಗ: ‘ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳುವ ಫಲಾನುಭವಿಗಳು ಕೂಲಿ ಕಾರ್ಮಿಕರು ಸಿಗದೇ ತೊಂದರೆ ಅನುಭವಿಸುತ್ತಿದ್ದರು. ಸರ್ಕಾರ ಹೊಸ­ದಾಗಿ ನರೇಗಾದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿದ್ದರಿಂದ ವಸತಿ ಮನೆಗಳ ನಿರ್ಮಾಣ ಕೆಲಸ ವೇಗ ಪಡೆದುಕೊಳ್ಳ­ಬಹುದು’ ಎಂದು ಉಂಚಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಉಮೇಶ ನಾಯ್ಕ ಕಲ್ಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.