ADVERTISEMENT

‘ಮಹಿಳಾ ಠಾಣೆ ’ಯಲ್ಲೂ ಸಿಬ್ಬಂದಿ ಕೊರತೆ

ಪಿ.ಕೆ.ರವಿಕುಮಾರ
Published 5 ಜನವರಿ 2017, 10:42 IST
Last Updated 5 ಜನವರಿ 2017, 10:42 IST

ಕಾರವಾರ: ಜಿಲ್ಲೆಯ ನಾನಾ ಇಲಾಖೆಯಲ್ಲಿ ಇರುವಂತೆ ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ನಗರದಲ್ಲಿ ಇತ್ತೀಚೆಗೆ ಸದ್ದಿಲ್ಲದೇ ಆರಂಭಗೊಂಡಿರುವ ಮಹಿಳಾ ಪೊಲೀಸ್‍ ಠಾಣೆ ಕೂಡ ಅದರಿಂದ ಹೊರತಾಗಿಲ್ಲ. ಪ್‍ರಮುಖ ಹುದ್ದೆಗಳಾದ ಮಹಿಳಾ ಸಿಪಿಐ, ಪಿಎಸ್‍ಐ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳು ಹೆಚ್ಚಳವಾದಾಗ ಸರ್ಕಾರ 30 ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್‌ ಠಾಣೆ ತೆರೆಯಲು ನಿರ್ಧರಿಸಿತ್ತು. ಅದರಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಠಾಣೆ ಸ್ಥಾಪನೆಗೊಂಡಿದ್ದು, ಈ ಜಿಲ್ಲೆಯಲ್ಲಿ ಹಲವು ಕಾರಣಗಳಿಂದ ತಡವಾಗಿ ಆರಂಭಗೊಂಡಿದೆ.

ಐಪಿಸಿ ಸೆಕ್ಷನ್‌ 498ಎ ಅಡಿ ವರದಕ್ಷಿಣೆ ಕಿರುಕುಳ, 354 ಮತ್ತು 376 ಸೆಕ್ಷನ್‌ನಡಿ ಮಹಿಳಾ ದೌರ್ಜನ್ಯ ಸೇರಿದಂತೆ ಅತ್ಯಾಚಾರ, ಚುಡಾಯಿಸುವುದು ಮುಂತಾದ ಮಹಿಳಾ ಮತ್ತು ಮಕ್ಕಳ ಸಂಬಂಧಿತ ಪ್ರಕರಣಗಳನ್ನು ಪ್ರತ್ಯೇಕವಾಗಿ ಈ ಠಾಣೆ ತನಿಖೆ ನಡೆಸಲಿದೆ. ಇದರ ವ್ಯಾಪ್ತಿ ನಗರಕ್ಕೆ ಮಾತ್ರ ಸೀಮಿತವಾಗದೇ ಇಡೀ ಜಿಲ್ಲೆಯನ್ನೊಳಗೊಂಡಿದೆ.
ಮಹಿಳಾ ಸಿಬ್ಬಂದಿಯ ನಿರಾಸಕ್ತಿ

ಮಾರ್ಗಸೂಚಿ ಪ್ರಕಾರ ಕಾರವಾರ ಮಹಿಳಾ ಪೊಲೀಸ್‌ ಠಾಣೆಗೆ 44 ಸಿಬ್ಬಂದಿ ಅವಶ್ಯಕತೆ ಇದೆ.  ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಒಟ್ಟು 149 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಕಾರಣಗಳಿಂದ ಬಹುತೇಕ ಮಹಿಳಾ ಸಿಬ್ಬಂದಿ ಮಹಿಳಾ ಠಾಣೆಯಲ್ಲಿ ಕೆಲಸ ಮಾಡಲು ಹಿಂದೇಟು ಹಾಕಿದ್ದಾರೆ.

ಈ ಠಾಣೆಯ ಆರಂಭಕ್ಕೆ ಬೇಕಾದ ಕನಿಷ್ಠ 15 ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಒತ್ತಡ ತಂತ್ರ ಅನುಸರಿಸಿ ನಿಯೋಜಿಸಿದ್ದಾರೆ. ‘ಠಾಣೆ ಸಮರ್ಪಕವಾಗಿ ನಡೆಯಲು ಬೇಕಾದ ಕನಿಷ್ಠ ಸಿಬ್ಬಂದಿ ಈಗ ಇದ್ದಾರೆ. ಪೀಠೋಪಕರಣ ಹಾಗೂ ಠಾಣೆಗೆ ಅಗತ್ಯ ಸೌಕರ್ಯವನ್ನು ಕಲ್ಪಿಸುವ ಕಾರ್ಯ ಕೂಡ ಶೀಘ್ರವೇ ನಡೆಯಲಿದೆ’ ಎಂದು ಕಾರವಾರ ಸಿಪಿಐ ಶರಣಗೌಡ.ವಿ.ಎಚ್‌. ‘ಪ್ರಜಾವಾಣಿ’ಗೆ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.