ADVERTISEMENT

ಮಹಿಳೆಗೆ ಟಿಕೆಟ್ ನೀಡುವ ಸಾಧ್ಯತೆಯಿಲ್ಲ

ಜೆಡಿಎಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೆ ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:57 IST
Last Updated 11 ಜುಲೈ 2017, 11:57 IST

ಶಿರಸಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ– ಸಿದ್ದಾಪುರ ಕ್ಷೇತ್ರದ ಟಿಕೆಟ್‌ ಅನ್ನು ಶಶಿಭೂಷಣ ಹೆಗಡೆ ಅವರಿಗೆ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ’ ಎಂದು ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೆ ಗೌಡ ಹೇಳಿದರು.

ಸೋಮವಾರ ಇಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿರಸಿ– ಸಿದ್ದಾಪುರ ಕ್ಷೇತ್ರದ ಟಿಕೆಟ್‌ ಅನ್ನು ಮಹಿಳೆಯರಿಗೆ ನೀಡಲು ಸಾಧ್ಯವಿಲ್ಲ.

ಈಗಾಗಲೇ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಶಿಭೂಷಣ ಹೆಗಡೆ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇದು ಆಷಾಢ ಮಾಸವಾಗಿರುವುದರಿಂದ ಪಟ್ಟಿ ಬಿಡುಗಡೆಯಾಗಿಲ್ಲ. ಶ್ರಾವಣ ಮಾಸದ ಆರಂಭದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ’ ಎಂದರು.

ADVERTISEMENT

‘ಪಕ್ಷದ ವಿರುದ್ಧ ಹೇಳಿಕೆ ನೀಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ತಪ್ಪಿನ ಅರಿವಾಗಿದೆ. ಅವರು ಪಕ್ಷದ ವರಿಷ್ಠರ ಕ್ಷಮೆ ಕೋರಿದ್ದಾರೆ. ಎಲ್ಲ ಪಕ್ಷಗಳಲ್ಲಿಯೂ ಇಂತಹ ಸಂದರ್ಭಗಳು ಎದುರಾಗುತ್ತವೆ. ಆದರೆ ಪ್ರಜ್ವಲ್ ಎಚ್‌.ಡಿ.ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಈ ವಿಚಾರವನ್ನು ಅನಗತ್ಯವಾಗಿ ಬೆಳೆಸಲಾಗುತ್ತಿದೆ.

ಪ್ರಜ್ವಲ್ ಅವರಿಗೆ ರಾಜಕೀಯ ಅನುಭವ ಕಡಿಮೆ. ಅನುಭವದ ಕೊರತೆಯಿಂದ ಇಂತಹ ಬೆಳವಣಿಗೆ ನಡೆದಿದೆ. ಕುಟುಂಬದಲ್ಲಿ ಅಪಸ್ವರ ಬಂದಾಗ ಬೇಸರ ಮೂಡುವುದು ಸಹಜ. ಆದರೆ ದೇವೇಗೌಡರ ಕುಟುಂಬಕ್ಕೆ ಇವೆಲ್ಲ ಹೊಸತಲ್ಲ. ಹೀಗಾಗಿ ಕುಮಾರಸ್ವಾಮಿ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆ ಎದುರಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಮರಿತಿಬ್ಬೆ ಗೌಡ ಉತ್ತರಿಸಿದರು.

‘ರಾಷ್ಟ್ರೀಯ ಪಕ್ಷಗಳಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಹಲವರು ಜೆಡಿಎಸ್‌ನೆಡೆಗೆ ಮುಖ ಮಾಡುತ್ತಿದ್ದಾರೆ. ಇದು ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿರುವ ಜನಪರ ಕಾರ್ಯ ಇನ್ನಷ್ಟು ಪ್ರಚುರಗೊಳ್ಳಬೇಕು. ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರು ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ನೆನಪಿಸುವ ಕಾರ್ಯ ಕಾರ್ಯಕರ್ತರಿಂದ ಆಗಬೇಕು’ ಎಂದು ಅವರು ಹೇಳಿದರು.

ಪಕ್ಷದ ಪ್ರಮುಖ ಶಶಿಭೂಷಣ ಹೆಗಡೆ ಮಾತನಾಡಿ, ‘ಜೆಡಿಎಸ್‌ ಬಗ್ಗೆ ಒಲವು ತೋರುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರೂ ಮರಳಿ ಮನೆಗೆ ಸೇರಿದಂತೆ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.

ಕೆ.ವಿ.ಹೆಗಡೆ ಅಂದಳ್ಳಿ, ವಿ.ಎಸ್.ಹೆಗಡೆ ಕಾಳೀಸರ, ರಮೇಶ ಕೊಡಿಯಾ, ಪ್ರಮೋದ ಹೆಗಡೆ ಈ ಸಂದರ್ಭದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಪಕ್ಷದ ಪ್ರಮುಖರಾದ ಆರ್.ಜಿ.ನಾಯ್ಕ, ತಿಮ್ಮಪ್ಪ ಮಡಿವಾಳ, ಎಸ್.ಕೆ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.