ADVERTISEMENT

ಮುಗಿಯದ ಕಾಮಗಾರಿ: ಸವಾರರು ಹೈರಾಣ

ಶಿರವಾಡದ ರೈಲು ನಿಲ್ದಾಣ ರಸ್ತೆ: ಅಡಿಗಾಲುವೆ ನಿರ್ಮಾಣ: ` 1.50 ಲಕ್ಷ ವೆಚ್ಚದ ಯೋಜನೆ

ಪಿ.ಕೆ.ರವಿಕುಮಾರ
Published 11 ಮಾರ್ಚ್ 2017, 12:00 IST
Last Updated 11 ಮಾರ್ಚ್ 2017, 12:00 IST
ಕಾರವಾರ: ತಾಲ್ಲೂಕಿನ ಶಿರವಾಡದ ರೈಲ್ವೆಸ್ಟೇಷನ್‌ ರಸ್ತೆಯಲ್ಲಿ ಅಡಿಗಾಲುವೆ (ಸ್ಲ್ಯಾಬ್‌ ಕಲ್ವರ್ಟ್‌) ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಈ ಭಾಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸುತ್ತಲಿನ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. 
 
ಈ ರಸ್ತೆ ಮೊದಲೇ ಕಿರಿದಾಗಿದ್ದು, ಇದರ ಒಂದು ಬದಿಯಲ್ಲಿ ಗುಡ್ಡ ಸಹ ಇದೆ. ಮಳೆಗಾಲದಲ್ಲಿ ಈ ಗುಡ್ಡದಿಂದ ಇಳಿಯುವ ನೀರು ರಸ್ತೆಯಡಿ ಅಳವಡಿಸಿದ್ದ ಪೈಪ್‌ ಮೂಲಕ ಸರಾಗವಾಗಿ ಹರಿದು ಹೋಗುತ್ತಿತ್ತು. ಅದು ಹಾಳಾಗಿರುವುದರಿಂದ ಈ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯು `1.50 ಲಕ್ಷ ವೆಚ್ಚದಲ್ಲಿ ಅಡಿಗಾಲುವೆ ನಿರ್ಮಿಸುತ್ತಿದೆ. ಆದರೆ ಕಾಮಗಾರಿ ಆರಂಭಗೊಂಡು ನಾಲ್ಕೈದು ತಿಂಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದು ಸ್ಥಳೀಯರ ನೆಮ್ಮದಿ ಕೆಡಿಸಿದೆ.
 
ದೂಳಿನ ಮಜ್ಜನ: ಮೊದಲ ಹಂತದಲ್ಲಿ ರಸ್ತೆಯ ಅರ್ಧ ಭಾಗವನ್ನು ಅಡ್ಡಲಾಗಿ ಅಗೆದು ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಅಗೆದ ಮಣ್ಣನ್ನು ರಸ್ತೆ ಬದಿಯಲ್ಲೇ ಹಾಕಲಾಗಿದ್ದು, ವಾಹನ ಸಂಚರಿಸಿದರೆ ದೂಳು ಮೇಲೇಳುತ್ತಿದೆ. ಇದರಿಂದ ಸೈಕಲ್‌, ದ್ವಿಚಕ್ರ ವಾಹನ ಸವಾರರ ಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಅವರ ಬಟ್ಟೆಗಳು ರಾಡಿಯಾಗುತ್ತಿವೆ. 
 
‘ವಾಹನ ಸವಾರರು ಹಾಗೂ ಸುತ್ತಲಿನ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟ ಹೇಳತೀರದು. ಕಾಮಗಾರಿ ವಿಳಂಬ ಆಗಿರುವುದರಿಂದ ಇಷ್ಟೆಲ್ಲಾ ತೊಂದರೆ ಅನುಭವಿಸುವಂತಾಗಿದೆ. ಶಿರವಾಡದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ನಿತ್ಯ ನೂರಾರು ಪ್ರಯಾಣಿಕರು, ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ.
 
ಆದರೆ ರಸ್ತೆಯ ದುಃಸ್ಥಿತಿಯಿಂದಾಗಿ ಅವರು ಪರಿತಪಿಸುವಂತಾಗಿದೆ. ಹೀಗಾಗಿ ಕಾಮಗಾರಿಯನ್ನು ಬೇಗನೇ ಪೂರ್ಣ ಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಪಿಡಬ್ಲ್ಯುಡಿ ಇಲಾಖೆಗೆ ಮನವಿ ಕೂಡ ನೀಡಿದ್ದೇವೆ’ ಎನ್ನುತ್ತಾರೆ ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯ ಕಿಶೋರ್‌ ಶೇಜವಾಡಕರ. 
 
ಕ್ಯೂರಿಂಗ್‌ನಿಂದ ವಿಳಂಬ:  ‘ಅಡಿಗಾಲುವೆ ನಿರ್ಮಿಸಲು ರಸ್ತೆಯನ್ನು ಅಡ್ಡಲಾಗಿ ಅಗೆದರೆ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತದೆ ಎನ್ನುವ ಕಾರಣಕ್ಕೆ ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದೇವೆ. ಮೊದಲು ರಸ್ತೆಯ ಅರ್ಧಭಾಗವನ್ನು ಅಡ್ಡಲಾಗಿ ಅಗೆದು ಅಡಿಗಾಲುವೆ ನಿರ್ಮಾಣ ಮಾಡಲಾಗಿದೆ.

ಇದೀಗ ಇನ್ನೊಂದು ಅರ್ಧ ಭಾಗದ ಕಾಮಗಾರಿ ನಡೆಯುತ್ತಿದೆ. ಸ್ಲ್ಯಾಬ್‌ಗೆ ನೀರುಣಿಸಲು (ಕ್ಯೂರಿಂಗ್‌) ಕನಿಷ್ಠ 24 ದಿನಗಳು ಹಿಡಿದಿದ್ದರಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಎಂಜಿನಿಯರ್‌ ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.