ADVERTISEMENT

ಮುಗಿಯದ ತನಿಖೆ, ಪತ್ತೆಯಾಗದ ಆರೋಪಿಗಳು

ಚಿತ್ತರಂಜನ್ ಹತ್ಯೆಗೆ 18 ವರ್ಷ, ತಿಮ್ಮಪ್ಪ ನಾಯ್ಕ ಹತ್ಯೆಗೆ 10 ವರ್ಷ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 6:46 IST
Last Updated 21 ಏಪ್ರಿಲ್ 2014, 6:46 IST

ಭಟ್ಕಳ: ಶಾಸಕರಾಗಿದ್ದ ಡಾ.ಚಿತ್ತರಂಜನ್‌ ಹತ್ಯೆಯಾಗಿ 18 ವರ್ಷಗಳು ಕಳೆದರೆ, ಬಿಜೆಪಿ ಮುಖಂಡರಾಗಿದ್ದ ತಿಮ್ಮಪ್ಪ ನಾಯ್ಕ ಹತ್ಯೆಯಾಗಿ 10 ವರ್ಷ. ಆದರೂ ಈವರೆಗೆ ಎರಡೂ ಹತ್ಯೆಯ ತನಿಖೆ ಮುಗಿದಿಲ್ಲ. ಆರೋಪಿಗಳ ಪತ್ತೆಯೂ ಆಗಿಲ್ಲ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಬಂದಾಗ ಹತ್ಯೆಯಾದ ಚಿತ್ತರಂಜನ್‌ ಹಾಗೂ ತಿಮ್ಮಪ್ಪ ನಾಯ್ಕರ ನೆನಪು ಭಟ್ಕಳದವರಿಗೆ ಆಗುತ್ತದೆ. 1996 ರ ಏಪ್ರಿಲ್‌ 10ರಂದು ಭಟ್ಕಳದ ಬಿಜೆಪಿ ಶಾಸಕರಾಗಿದ್ದ ಡಾ.ಚಿತ್ತರಂಜನ್‌ ಅವರನ್ನು ಅವರ ಮನೆಯಲ್ಲೆ ಹಂತಕರು ಗುಂಡಿಕ್ಕಿ ಹತ್ಯೆ ನಡೆಸಿದ್ದರು. ಹತ್ಯೆಯಾದ ಸಂದರ್ಭ ಉತ್ತರ ಕನ್ನಡ ಸೇರಿದಂತೆ ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ನಡೆದಿತ್ತು.

ಕೆನರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಈಗಿನ ಹಾಲಿ ಸಂಸದ ಅನಂತಕುಮಾರ ಹೆಗಡೆ ಸ್ಪರ್ಧಿಸಿದ್ದರು. ಚಿತ್ತರಂಜನ್‌ರ ಹತ್ಯೆ ನಡೆದಾಗ  ಬಿಜೆಪಿಯ ಹಿರಿಯ ಧುರೀಣ ಎಲ್.ಕೆ ಅಡ್ವಾಣಿ ಸ್ವತಃ ಭಟ್ಕಳಕ್ಕೆ ಬಂದು ಚಿತ್ತರಂಜನ್‌ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ನಂತರ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರದಲ್ಲಿ ಗೃಹಮಂತ್ರಿಗಳಾದರು. ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೂ ಹಂತಕರ ಪತ್ತೆಯಾಗಿಲ್ಲ.

ಚಿತ್ತರಂಜನ್‌ ಹತ್ಯೆಯ ಅನುಕಂಪದ ಅಲೆ, ಬುಲೆಟ್‌ಗೆ ಬ್ಯಾಲೆಟ್‌ನಲ್ಲಿ ಉತ್ತರ ನೀಡಿ ಎಂಬ ಉತ್ತೇಜನದ ಭಾಷಣ ಮಾಡುತ್ತಲೇ ಚುನಾವಣೆಯಲ್ಲಿ ಗೆಲುವು ಕಂಡ ಚಿತ್ತರಂಜನ್‌ ಅವರ ಶಿಷ್ಯ ಅನಂತಕುಮಾರ್ ನಾಲ್ಕು ಬಾರಿ ಸಂಸದರಾದರೆ, ಮತ್ತೊಬ್ಬ ಶಿಷ್ಯ ಶಿವಾನಂದ ನಾಯ್ಕ ಎರಡು ಬಾರಿ ಶಾಸಕರಾಗಿ, ಸಚಿವರಾದರು. ಇವರಿಬ್ಬರೂ ಚಿತ್ತರಂಜನ್‌ ಹತ್ಯೆಯ ತನಿಖೆಯನ್ನು ಚುರುಕುಗೊಳಿಸುವಲ್ಲಿ ಮುಂದಾಗಲಿಲ್ಲ ಎಂಬ ಆರೋಪ ಇಂದಿಗೂ ಇದೆ.

ಚಿತ್ತರಂಜನ್‌ ಅವರ ಹತ್ಯೆಯ ತನಿಖೆಯನ್ನು ನಡೆಸಿದ ಸಿಬಿಐ 264ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿಯೂ ಇದೊಂದು ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿತ್ತು. ಇದಕ್ಕೆ  ರಾಮಚಂದ್ರ ಹೆಗಡೆ ಎಂಬವರು ಆಕ್ಷೇಪ ಸಲ್ಲಿಸಿದಾಗ, ಪುನಃ ತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ನೀಡುವಂತೆ ಸಿಬಿಐ ಗೆ ನ್ಯಾಯಾಲಯ ಸೂಚಿಸಿತ್ತು. ಇದಾಗಿ 10 ವರ್ಷಗಳೆ ಕಳೆದಿದೆ. 

ತಿಮ್ಮಪ್ಪ ನಾಯ್ಕ ಹತ್ಯೆ: ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಅವರ ಹತ್ಯೆ 2004ರ ಮೇ 3ರಂದು ರಾತ್ರಿ ನಡೆದಿತ್ತು. ಆಗ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಕಾಯುತ್ತಿದ್ದರು. ತಿಮ್ಮಪ್ಪ ನಾಯ್ಕ ತಮ್ಮ ವ್ಯವಹಾರವನ್ನು ಮುಗಿಸಿ, ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ನಡೆಸಿದ್ದರು. ತಿಮ್ಮಪ್ಪ ಅವರ ಹತ್ಯೆಯ ತನಿಖೆಯನ್ನು ಪೊಲೀಸ್‌ ಇಲಾಖೆಯೇ ನಡೆಸುತ್ತಿದೆ. ಹತ್ಯೆಯಾಗಿ 10 ವರ್ಷಗಳೇ ಕಳೆದಿವೆ. ಈವರೆಗೂ ಆರೋಪಿಗಳ ಪತ್ತೆಯಾಗಿಲ್ಲ.

ತಿಮ್ಮಪ್ಪ ನಾಯ್ಕರ ಅಂತ್ಯ ಸಂಸ್ಕಾರದ ವೇಳೆ ಯಡಿಯೂರಪ್ಪ ಭಟ್ಕಳಕ್ಕೆ ಬಂದಿದ್ದರು. ಮುಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳೂ ಆದರು. ಆದರೂ ತನಿಖೆಗೆ ಚುರುಕು ನೀಡಲಿಲ್ಲ ಎಂಬ ಆರೋಪ ಇದೆ.

ಚಿತ್ತರಂಜನ್‌ ಅವರ ಹತ್ಯೆಯ ತನಿಖೆ ಸಿಬಿಐ ನಡೆಸುತ್ತಿದೆ. ತಿಮ್ಮಪ್ಪ ನಾಯ್ಕರ ಹತ್ಯೆಯ ತನಿಖೆ ಪೊಲೀಸ್‌ ಇಲಾಖೆ ನಡೆಸುತ್ತಿದೆ. ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ ಎಂದು ಬಿಜೆಪಿ ಭಟ್ಕಳ ತಾಲ್ಲೂಕು ಪ್ರಮುಖ ಗೋವಿಂದ ನಾಯ್ಕ ಹೇಳುತ್ತಾರೆ.

‘ಕೆಲವು ತಿಂಗಳ ಹಿಂದೆ ಬಂಧಿತನಾಗಿರುವ ಇಂಡಿಯನ್‌ ಮುಜ್ಹಾಹಿದ್ದೀನ್‌ ಸಂಘಟನೆಯ ಉಗ್ರ ಯಾಸೀನ್‌ ಭಟ್ಕಳನನ್ನು ಈ ಎರಡೂ ಹತ್ಯೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಈಗಾಗಲೇ ಒತ್ತಾಯಿಸಿದ್ದು, ತನಿಖೆ ನಡೆಸಿದಲ್ಲಿ ಆರೋಪಿಗಳ ಪತ್ತೆ ಸಾಧ್ಯತೆಯಿದೆ’ ಎಂದು ನಾಯ್ಕ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.