ADVERTISEMENT

ರೈತರಿಗೆ ಈಗ ಭೂಮಿ ಹದಗೊಳಿಸುವ ಕಾಯಕ

​ಪ್ರಜಾವಾಣಿ ವಾರ್ತೆ
Published 17 ಮೇ 2017, 9:00 IST
Last Updated 17 ಮೇ 2017, 9:00 IST

ಮುಂಡಗೋಡ: ಸತತ ಬರಗಾಲದಿಂದ ತತ್ತರಿಸಿದ್ದ ರೈತ ಸಮೂಹಕ್ಕೆ, ಸತತ ಮಳೆಯಿಂದ ಕಷ್ಟಗಳ ಸರಮಾಲೆ ಕಳಚೀತೆ ಎಂಬ ಹೊಸ ನಿರೀಕ್ಷೆ ಮೂಡಿದೆ.
ಈ ಆಶಾಭಾವನೆಯಿಂದ, ಮತ್ತೆ ನೆಗಿಲು ಹಿಡಿದು, ಭೂತಾಯಿ, ವರುಣ, ನೇಸರನ ಜೊತೆ ಬೆರೆಯುತ್ತ, ಕಾಯಕ ಮಾಡಲು ಮುಂದಾಗಿದ್ದಾರೆ. ಬರಗಾಲದಿಂದ ಬರಡು ಭೂಮಿಯಂತಾಗಿರುವ ಗದ್ದೆಯಲ್ಲಿ, ಮತ್ತೆ ಹಸಿರು ಬೆಳೆದು, ಭತ್ತದ ಕಣಜ ತುಂಬಲು ಭೂತಾಯಿಯ ಮಗ ಗದ್ದೆಯತ್ತ ಮುಖ ಮಾಡಿದ್ದಾರೆ.

ಕಳೆದೆರಡು ವರ್ಷಗಳಿಂದ ಭೀಕರ ಬರಗಾಲಕ್ಕೆ, ಬೆಂಡಾಗಿರುವ ನೇಗಿಲಯೋಗಿ, ಇತ್ತೀಚೆಗೆ ಸುರಿದ ಒಂದೆರೆಡು ಮಳೆಗಳು,  ಯೋಗಿ ಉಳುಮೆ ಮಾಡುವಂತೆ ಉತ್ಸಾಹ ತುಂಬಿವೆ.  ಕಳೆದ ಕೆಲ ದಿನಗಳ ಹಿಂದೆ ತಾಲ್ಲೂಕಿನ ಬಹುತೇಕ ಕಡೆ,  ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.

ಬಿತ್ತನೆ ಕಾರ್ಯಕ್ಕೆ ಮೊದಲು ‘ಭೂಮಿ ಹದಗೊಳಿಸುವ’ ಕಾಯಕದಲ್ಲಿ ರೈತರು ನಿರತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೈತನ ಬದುಕು ಹಸನಾಗದಿದ್ದರೂ ಸಹಿತ, ವರ್ಷದ ಮೇ ತಿಂಗಳಲ್ಲಿ ಹೊಸ ಉತ್ಸಾಹ, ನಿರೀಕ್ಷೆಯೊಂದಿಗೆ, ಬೆವರು ಹರಿಸಲು ಅನ್ನದಾತ ಮುಂದಾಗಿ, ಗದ್ದೆಯನ್ನು ಹಸನುಗೊಳಿಸುತ್ತಿದ್ದಾನೆ.

ADVERTISEMENT

ಮುಂಡಗೋಡ ಹಾಗೂ ಪಾಳಾ ಹೋಬ ಳಿಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಕುಂಟೆ ಹೊಡೆದು ನೆಲವನ್ನು ಹದಗೊಳಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಒಂದೆರೆಡು ಉತ್ತಮ ಮಳೆ ಸುರಿದು, ಭೂಮಿಯನ್ನು ತಂಪಾಗಿಸಿರುವದು, ಯೋಗಿಯ ನೇಗಿಲ ವೇಗವನ್ನು ಹೆಚ್ಚಿಸುವಂತೆ ಮಾಡಿದೆ.

ತಾಲ್ಲೂಕಿನ ಕಲಕೇರಿ, ಚಿಗಳ್ಳಿ, ಇಂದೂರು, ಕಾತೂರ, ಸಾಲಗಾಂವ, ಪಾಳಾ ಸೇರಿದಂತೆ ಕೆಲವು ಭಾಗಗಳಲ್ಲಿ ಒಣ ಬಿತ್ತನೆ ಕಾರ್ಯ ಮಾಡಲು ರೈತರು ಭೂಮಿ ಸಜ್ಜುಗೊಳಿಸಿದ್ದಾರೆ.

‘ವಾಡಿಕೆಯಂತೆ ಸ್ವಲ್ಪ ಮಟ್ಟಿಗೆ ಉತ್ತಮ ಮಳೆಯಾಗಿದ್ದರಿಂದ,  ವರ್ಷದ ಕಾಯಕಕ್ಕೆ ರೈತರು ತುಸು ಬೇಗ ಚಾಲನೆ ನೀಡಿದ್ದಾರೆ. ಭೂಮಿ ಹಸಿಯಾಗಿದ್ದು, ಬಿತ್ತನೆ ಮಾಡಲು ಯೋಗ್ಯವಾಗಿದೆ. ಬಿಸಿಲಿನ ಪ್ರಮಾಣ ಕಡಿಮೆಯಾಗಿ ಭೂಮಿ ತಂಪಾಗಿಸುವಂತ ಉತ್ತಮ ಮಳೆಯಾದರೆ, ಇನ್ನೊಂದು ವಾರದಲ್ಲಿ ಹೆಚ್ಚಿನ ರೈತರು ಬಿತ್ತನೆ ಕಾರ್ಯ ಮಾಡುವ ಸಾಧ್ಯತೆಯಿದೆ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.

‘ಹಂಗಾಮು ಪೂರ್ವ ಮಳೆಯು ತಾಲ್ಲೂಕಿನಾದ್ಯಂತ ಸ್ವಲ್ಪ ಮಟ್ಟಿಗೆ ಆಗಿದ್ದು, ಕೂರಿಗೆ ಬಿತ್ತನೆ ಕಾರ್ಯಕ್ಕೆ ಅನುಗುಣವಾಗಿ ಮಾಗಿ ಉಳುಮೆ, ಕೊಟ್ಟಿಗೆ ಗೊಬ್ಬರ ಸಾಗಾಣಿಕೆ, ಹರಡುವದು, ಕೃಷಿ ಸುಣ್ಣ ಬಳಕೆ ಮಾಡುವದು ಸೇರಿದಂತೆ ಅಗತ್ಯ ಕಾರ್ಯಗಳನ್ನು ರೈತರು ಮಾಡಿಕೊಳ್ಳಬೇಕು.  ರಿಯಾಯಿತಿ ದರದಲ್ಲಿ ವಿವಿಧ ತಳಿಯ ಭತ್ತದ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಅರವಿಂದ ಕಮ್ಮಾರ ಹೇಳಿದರು.

‘ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಮಾಡಬೇಕಲ್ಲದೇ, ಗದ್ದೆಯಲ್ಲಿ ತೇವಾಂಶವನ್ನು ಗಮನಿಸಿ ಬಿತ್ತನೆ ಕಾರ್ಯ ಕೈಗೊಂಡರೆ ಉತ್ತಮ. ಅಧಿಕೃತ ಮಾರಾಟಗಾರರಿಂದ ರಸಗೊಬ್ಬರ, ಸಸ್ಯಸಂರಕ್ಷಣಾ ಔಷಧಿಯನ್ನು ಖರೀದಿಸುವಂತೆ’ ಸಹಾಯಕ ಕೃಷಿ ನಿರ್ದೇಶಕ ಅರವಿಂದ ಕಮ್ಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.