ADVERTISEMENT

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಮೊರೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:08 IST
Last Updated 16 ಜನವರಿ 2017, 8:08 IST
ರೈತರ ಸಂಕಷ್ಟಕ್ಕೆ ಸ್ಪಂದಿಸಲು ಮೊರೆ
ರೈತರ ಸಂಕಷ್ಟಕ್ಕೆ ಸ್ಪಂದಿಸಲು ಮೊರೆ   

ಶಿರಸಿ: ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಬರಗಾಲ ಪರಿಹಾರವನ್ನು ಈ ಭಾಗದ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಕಾಳಂಗಿ ಸೇವಾ ಸಹಕಾರಿ ಸಂಸ್ಥೆ ಅಧ್ಯಕ್ಷ ಭೈರವ ಕಾಮತ್ ಮನವಿ ಸಲ್ಲಿಸಿದರು.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಸಚಿವರನ್ನು ಭೇಟಿ ಮಾಡಿದ ಅವರು ಬದನಗೋಡ ಹಾಗೂ ಅಂಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರ ಪ್ರಮುಖ ಬೆಳೆ ಭತ್ತವಾಗಿದೆ. ಹೆಚ್ಚಿನ ನೀರಾವರಿ ಸೌಲಭ್ಯ ಹೊಂದಿಲ್ಲದ ರೈತರು ಮಳೆಯನ್ನೇ ನಂಬಿ ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಈ ವರ್ಷ ಆರಂಭದಲ್ಲಿ ಸುರಿದ ಮುಂಗಾರು ಮಳೆಗೆ ರೈತರು ಸಾಲ ಸೂಲ ಮಾಡಿ ಬೀತ್ತನೆ ಬೀಜ, ಗೋಬ್ಬರ ಖರೀದಿಸಿ ಬೀತ್ತನೆ ಕಾರ್ಯ ಮುಗಿಸಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.

ಆದರೆ ಮಳೆ ಕೈಕೊಟ್ಟ ಕಾರಣ ಬೆಳೆ ಬಂದಿಲ್ಲ. ಮಳೆಯ ಅಭಾವದಿಂದ ಬೆಂಕಿರೋಗ ಹಾಗೂ ಕೀಟಗಳ ಭಾದೆಯಿಂದ ತತ್ತರಿಸಿರುವ ಭತ್ತದ ಇಳುವರಿ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಮುಂದಿನ ಬದುಕುವ ದಾರಿ ತೋರಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಆಗಬೇಕಾಗಿದೆ’ ಎಂದರು.

‘ಕಳೆದ ವರ್ಷ ಈ ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಗುರುತಿಸಿ ರೈತರಿಗೆ ಪರಿಹಾರ ನೀಡಿದೆ. ಈ ಹಿಂದೆ ಯಾವುದೇ ಸರ್ಕಾರ ನೀಡದ ಪರಿಹಾರ ಕಳೆದ ವರ್ಷ ರೈತರಿಗೆ ದೊರೆತಿದೆ. ಈ ವರ್ಷ ಇನ್ನೂ ಕಷ್ಟದ ಪರಿಸ್ಥಿತಿ ಇದ್ದರೂ ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿಲ್ಲ.

ಈ ಹಿಂದೆ ಕೃಷಿ ಸಚಿವರಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಯನ್ನು ನೀಡಲಾಗಿತ್ತು. ಈ ಭಾಗದ ರೈತರ ಸಾಲ ಮನ್ನಾ ಮಾಡಲು ಪ್ರಯತ್ನಿಸಬೇಕು. ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸಾರಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT