ADVERTISEMENT

ವೈಭವದ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:27 IST
Last Updated 18 ಏಪ್ರಿಲ್ 2017, 6:27 IST

ಹಳಿಯಾಳ: 24 ವರ್ಷಗಳ ನಂತರ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಗ್ರಾಮ­ದೇವಿ ಶ್ರೀಉಡಚಮ್ಮ ದೇವಿ ಹಾಗೂ ಶ್ರೀಲಕ್ಷ್ಮಿ ದೇಮವ್ವ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮ­ವಾರ ವೈಭವದ ರಥೋತ್ಸವ ನಡೆಯಿತು.

ಸ್ಥಳೀಯ ಕಿಲ್ಲಾ ಹತ್ತಿರ ಇರುವ ಮಹಾರಥೋತ್ಸವಕ್ಕೆ ವಿವಿಧ ಧರ್ಮ ಗುರುಗಳು ಪೂಜೆ  ಸಲ್ಲಿಸಿದ ನಂತರ ಗ್ರಾಮದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಂಗೇಶ ದೇಶಪಾಂಡೆ ಹಾಗೂ ಪಂಚರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌. ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ 1 ಗಂಟೆಗೆ ಪ್ರಾರಂಭ­ವಾದ ರಥೋತ್ಸವ ಸುಮಾರು 6 ಗಂಟೆಗಳ ಕಾಲ ವಿವಿಧ ಬಡಾವಣೆ­ಗಳಾದ ದೇಸಾಯಿ ಗಲ್ಲಿ, ಕುಂಬಾರ ಗಲ್ಲಿ, ಅರ್ಬಲ್ ಬ್ಯಾಂಕ್ ವೃತ್ತ, ಮುಖ್ಯ ಬೀದಿಯಿಂದ ಸಾಗಿ ಶಿವಾಜಿ ವೃತ್ತದ ಬಳಿ ಬಂದು ಕೊನೆಗೊಂಡಿತು. ನಂತರ ಗ್ರಾಮದೇವಿ ಕಮಿಟಿ ಅಧ್ಯಕ್ಷರು ಹಾಗೂ ದೇಸಾಯಿ ಮನೆತನದವರು ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿಯನ್ನು ಜಾತ್ರಾ ಗದ್ದುಗೆಗೆ ಬೃಹತ್ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ರಥೋತ್ಸವದುದ್ದಕ್ಕೂ ವಿವಿಧ ವಾದ್ಯ ಮೇಳ, ಕರಡಿ ಮಜಲು, ಗುಂಡೊಳ್ಳಿಯ ಜಾಂಜ್, ಜಗ್ಗಲಿ ಮೇಳ ಜನಮನ­ಸೂರೆಗೊಂಡವು. ಕೊಲ್ಹಾಪು­ರದ ಶಾಹು ಡೋಲ ತಾಶಾ ವಿಶೇಷ ಮೇರಗು ನೀಡಿತು. ರಥ ಸಾಗುವ ಮುಂದೆ ಜೋಡಿ ಆನೆಗಳು ರಥಕ್ಕೆ ಸ್ವಾಗತ ಕೋರುತ್ತಾ ಮುಂದೆ ಸಾಗಿದವು. ರಥವು ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಲಾಯಿತು.

ADVERTISEMENT

ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಹೂವು, ಉತ್ತತ್ತಿಯನ್ನು ರಥಕ್ಕೆ ಅರ್ಪಿಸಿ ಊದೋ ಉದೋ ಉದೋ ಎಂದು ಜಯಘೋಷ ಹಾಕುತ್ತಿರುವುದು ಹಾಗೂ ಎಲ್ಲೆಂದರಲ್ಲಿ ಭಂಡಾರ ಎರಚುವುದು ಕಾಣಬರುತ್ತಿತ್ತು. ಲಕ್ಷಾಂ­ತರ ಜನರು ಪಾಲ್ಗೊಂಡಿದ್ದರು.  21ಕ್ಕೆ ಸಂಜೆ ದೇವಿ­ಯನ್ನು ಸೀಮೆಗೆ ಕಳುಹಿಸ­ಲಾಗುವುದು. 24 ರಂದು  ದೇವಸ್ಥಾನ­ದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.