ADVERTISEMENT

ಶಾಲ್ಮಲೆಯ ಸೊಬಗು ‘ಶಿವಗಂಗಾ’ ಜಲಪಾತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:20 IST
Last Updated 23 ಜುಲೈ 2017, 9:20 IST

ಬೇಸಿಗೆಯಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಜಲಪಾತಗಳು ಮುಂಗಾರಿನ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿವೆ. ಹಸಿರು ಕಾನನದ ನಡುವೆ ಧುಮ್ಮಿಕ್ಕುವ ಶಿವಗಂಗಾ ಜಲಪಾತ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಹಾಲಿನ ನೊರೆಯಂತೆ ಧುಮ್ಮಿಕ್ಕುವ ಶಾಲ್ಮಲಾ ನದಿ ಶಿವಗಂಗಾ ಜಲಪಾತ ವನ್ನು ಸೃಷ್ಟಿಸಿದೆ. ಶಿರಸಿ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿಯಲ್ಲಿ ರುವ ಜಲಪಾತ ನೋಡಲು ಹೋಗು ವುದಿದ್ದರೆ ಮೈಯಲ್ಲಿ ಕಸುವಿರಬೇಕು. ಕಾಡು ದಾರಿಯಲ್ಲಿ ಸಾಗುವಾಗ ಕಾಲಿಗೆ ಕಡಿಯುವ ಉಂಬಳ (ಜಿಗಣೆ)ದ ಕಾಟ ಎದುರಿಸಲು ಸಿದ್ಧವಿದ್ದರೆ ಜಲಪಾತ ವೀಕ್ಷಣೆ ಕಷ್ಟವಲ್ಲ.

ಮುಗಿಲಿಗೆ ಮುಖ ಮಾಡಿರುವ ಬೃಹದಾಕಾರದ ಮರಗಳು, ಕಾಡು ಜೀವಿಗಳ ಚೆಲ್ಲಾಟದ ನಡುವೆ ಕಣಿವೆಯಲ್ಲಿ ಹೆಜ್ಜೆ ಹಾಕುತ್ತ ಸಾಗಿದರೆ ಪರದೆಯಲ್ಲಿ ಮೂಡುವ ಚಿತ್ರದಲ್ಲಿ ಎತ್ತರದಿಂದ ಜಿಗಿಯುವ ಜಲಪಾತ ತೆರೆದುಕೊಳ್ಳುತ್ತದೆ. ಬಳುಕುತ್ತ ಬರುವ ಶಾಲ್ಮಲೆ ಇಲ್ಲಿ 74 ಅಡಿ ಎತ್ತರದಿಂದ ಕೆಳಕ್ಕೆ ಜಿಗಿಯುವಾಗ ಮಲ್ಲಿಗೆ ಮಾಲೆಯಂತೆ ಕಾಣುತ್ತಾಳೆ.

ADVERTISEMENT

ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ಕಾಲ ಕಳೆಯುವುದೇ ವಿಶಿಷ್ಟ ಅನುಭವ. ಮಲೆನಾಡಿನ ಜಲಪಾತಗಳಿಗೆ ಮಳೆಗಾಲದಲ್ಲಿ ಭೇಟಿ ನೀಡುವುದು ತುಸು ಕಷ್ಟ. ಆದರೂ ತುಂತುರು ಮಳೆಯಲ್ಲಿ ತೋಯುತ್ತ ಜಾರುವ ಕಲ್ಲಿನ ಮೇಲೆ ನಿಧಾನ ಹೆಜ್ಜೆ ಹಾಕುತ್ತ ಕಾಡು ಹಾದಿಯಲ್ಲಿ ಸಾಗುವ ಖುಷಿಯನ್ನು ಅನುಭವಿಸಬೇಕೆಂದಿದ್ದರೆ ಶಿವಗಂಗಾ ಜಲಪಾತಕ್ಕೆ ಭೇಟಿ ನೀಡಲು ಇದು ಸಕಾಲ. ಹುಲೇಕಲ್ ವಾನಳ್ಳಿ ಜಡ್ಡಿಗದ್ದೆ ಮಾರ್ಗವಾಗಿ ರಸ್ತೆಯಲ್ಲಿ ಸಾಗಿ ಮುಂದೆ ಅರ್ಧ ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಜಲಪಾತ ತಲುಪಬಹುದು.
ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.