ADVERTISEMENT

ಶಿಕ್ಷಣ ಇಲಾಖೆ ಕಾರ್ಯವೈಖರಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಮೇ 2017, 9:04 IST
Last Updated 17 ಮೇ 2017, 9:04 IST

ಕಾರವಾರ: ಜಿಲ್ಲೆಯಲ್ಲಿ 234 ಮಣ್ಣಿನ ಗೋಡೆಗಳ ಶಾಲೆಗಳಿದ್ದು, ನೂತನ ಕಟ್ಟಡ ಮಂಜೂರು ಮಾಡುವಂತೆ ಹಾಗೂ ಮಂಜೂರಾದ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಭೆಗಳಲ್ಲಿ ಎಚ್ಚರಿಸುತ್ತಿದ್ದರೂ ಸಹ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪುಷ್ಪಾ ನಾಯ್ಕ ಕಿಡಿಕಾರಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಕುರಿತು ಅಸಮಧಾನ ವ್ಯಕ್ತಪಡಿಸಿದರು.

‘ಹೊನ್ನಾವರ ತಾಲ್ಲೂಕಿನ ಬಾಳುಬೆಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ಮಂಜೂರಾಗಿರುವುದಕ್ಕೆ ಹಿಂದಿನ ಸಭೆಯಲ್ಲಿ ಡಿಡಿಪಿಐ ಅವರಿಗೆ ಧನ್ಯವಾದ ಸಲ್ಲಿಸಿದ್ದೆ. ಆದರೆ ಮಂಜೂರಿಯಾಗಿರುವ ಕಾಮಗಾರಿ ಈವರೆಗೆ ಪ್ರಾರಂಭವಾಗಿಲ್ಲ.

ADVERTISEMENT

ಅಲ್ಲದೇ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿಗೆ ಹಾಗೂ ನವೀಕರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದಿಂದ ಮಳೆಗಾಲ ಪ್ರಾರಂಭವಾಗಲಿದ್ದು, ಶಿಥಿಲಾವಸ್ಥೆಯಲ್ಲಿ ಇರುವ ಶಾಲೆಗಳಿಂದ ಯಾವುದೇ ಹಾನಿ ಸಂಭವಿಸದರೆ ಅದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಣೆ ಹೊರಬೇಕು. ಅಲ್ಲದೇ ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಇಲಾಖೆಯ ವಿರುದ್ಧ ದೂರು ನೀಡಲು ತಯಾರಿ ನಡೆಸಿದ್ದೇನೆ’ ಎಂದು ಹೇಳಿದರು.

‘3 ವರ್ಷದಿಂದ ಸತತವಾಗಿ ಈ ಕುರಿತು ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಎಚ್ಚರಿಸುತ್ತಿದ್ದೇನೆ. ಆದರೆ ಈ ಬಗ್ಗೆ ಇಲಾಖೆ ಹಾಗೂ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ ತಾಳಿದಂತಿದೆ. ಅಧಿಕಾರಿಗಳಿಗೆ ಹವಾನಿಯಂತ್ರಿತ ಕಚೇರಿ, ಓಡಾಡಲು ಇಲಾಖೆಯ ವತಿಯಿಂದ ವಾಹನ ನೀಡುತ್ತಾರೆ. ಆದರೆ ಬಡ ಮಕ್ಕಳು, ಶಿಕ್ಷಕರು ಮಣ್ಣಿನ ಗೋಡೆಗಳ ಶಾಲೆಗಳಲ್ಲಿ ಜೀವ ಹಿಡಿದುಕೊಂಡು ವಿದ್ಯಾಭ್ಯಾಸ ನಡೆಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇದೆ. ಅವರ  ವೇದನೆ, ಕಷ್ಟ ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ಕಾರವಾರ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ ಪಿ.ಕೆ.ಪ್ರಕಾಶ, ‘ನಾನು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕನಾಗಿ ನೇಮಕವಾಗಿ ಒಂದು ತಿಂಗಳಾಗಿದೆ. ಹೀಗಾಗಿ ಇದರ ಬಗ್ಗೆ ಅಷ್ಟೊಂದು ಮಾಹಿತಿ ನನಗೆ ಲಭ್ಯ ಇಲ್ಲ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದರು. ಸಭೆಯ ಬಳಿಕ ತಮ್ಮ ಕಚೇರಿಯಲ್ಲಿ ಇನ್ನೊಮ್ಮೆ ಚರ್ಚೆ ನಡೆಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಕಾರವಾರ ಶೈಕ್ಷಣಿಕ ಜಿಲ್ಲೆ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ಅಧಿಕಾರಿ ತರಾಟೆಗೆ: ‘ಕುಮಟಾ ತಾಲ್ಲೂಕಿನ ಹೆಗಡೆ ಹಾಗೂ ಕಾರವಾರದ ಕೆರವಡಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣವಾಗದೇ, ನನೆಗುದಿಗೆ ಬಿದ್ದಿವೆ. ತಾಲ್ಲೂಕು ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಯಾವುದೇ ಪರಿಶೀಲನೆಗಳನ್ನು ನಡೆಸುತ್ತಿಲ್ಲ. ಕೆಲವೊಂದು ಕಡೆ ಕಾಮಗಾರಿ ಪೂರ್ಣಗೊಂಡರು ಅದನ್ನು ಪಂಚಾಯ್ತಿಗೆ ಹಸ್ತಾಂತರ ಮಾಡುತ್ತಿಲ್ಲ. ಇದರಿಂದ ಜಿಲ್ಲೆಯ ಹಲವೆಡೆ ಬೇಸಿಗೆಯಲ್ಲಿ ನೀರಿನ ಪೂರೈಕೆಗೆ ಸಮಸ್ಯೆ ಉಂಟಾಗಿದೆ.’ ಎಂದು ಸದಸ್ಯರಾದ ಪ್ರದೀಪ ನಾಯಕ, ರತ್ನಾಕರ ನಾಯ್ಕ, ಚೈತ್ರಾ ಕೊಠಾರಕರ ಅಸಮಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ. ಪಾಟೀಲ್ ಅವರನ್ನು ಸದಸ್ಯರು ಕೇಳಿದರೆ ‘ಏಜೆನ್ಸಿಯವರಿಗೆ ಬಿಲ್‌ ಪಾವತಿಯಾಗಿರದ ಕಾರಣ ಕಾಮಗಾರಿ ತಡವಾಗಿದೆ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಉತ್ತರಿಸಿದರು. ಸಿಇಒ ಚಂದ್ರಶೇಖರ ನಾಯಕ ಮಾತನಾಡಿ, ‘ಸ್ವ ಉಸ್ತುವಾರಿ ವಹಿಸಿಕೊಂಡು ಕೆರವಡಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಕ್ಟೋಬರ್ ಒಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಪ್ರೌಢಶಾಲೆಗೆ ಆಡಿಯೋ ವಿಶ್ಯೂವಲ್ ಕೊಠಡಿ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ಡಿಡಿಪಿಐಗಳು ಹೇಳಿದರು. ಗ್ರಾಮ ಪಂಚಾಯ್ತಿ ಪಿಡಿಒಗಳ ಕಾರ್ಯ ವೈಖರಿ ಹಾಗೂ ಅವರ ಮೇಲಿನ ಆರೋಪಗಳನ್ನು ಪರಿಶೀಲಿಸುವಂತೆ ಸದಸ್ಯೆ ಶ್ರೀಕಲಾ ಶಾಸ್ತ್ರೀ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಆರ್.ಹೆಗಡೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಉಪಸ್ಥಿತರಿದ್ದರು.

ಧನ ಸಹಾಯ ಮಂಜೂರು ಮಾಡದ ಬ್ಯಾಂಕುಗಳು

‘ಸರ್ಕಾರದಿಂದ ಯೋಗ್ಯ ಫಲಾನುಭವಿಗಳಿಗೆ ನೀಡುವ ಸಹಾಯ ಧನ ಹಾಗೂ ಸಾಲವನ್ನು ಮಂಜೂರು ಮಾಡಲು ಬ್ಯಾಂಕಿನವರು ಸತಾಯಿಸುತ್ತಾರೆ. ಹೀಗಾಗಿ ಸರ್ಕಾರದ ಯೋಜನೆಗಳಿಂದ ಧನ ಸಹಾಯ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ಸಭೆಗೆ ಪುಷ್ಪಾ ನಾಯ್ಕ ಗಮನಕ್ಕೆ ತಂದರು.

ಜಿಲ್ಲಾ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕರು ಮಾತನಾಡಿ, ‘ಯೋಜನೆಗಳ ಕಾರ್ಯವ್ಯಾಪ್ತಿಗೆ ಬರುವ ಬ್ಯಾಂಕುಗಳು ಮಾತ್ರ ಸಾಲವನ್ನು ನೀಡುತ್ತಿದ್ದು, ಅಲ್ಲಿ ಖಾತೆ ಹೊಂದಿರದ ಫಲಾನುಭವಿಗಳಿಗೆ ಸಾಲ ನೀಡಲಾಗುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಪಾಟೀಲ, ಸಿಇಒ ಚಂದ್ರಶೇಖರ ನಾಯಕ ಅವರು ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಯೋಜನೆಗಳ  ಕಾರ್ಯವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಬ್ಯಾಂಕುಗಳು ಮಾಹಿತಿ ಒದಗಿಸುವಂತೆ ಸೂಚಿಸಿದರು.

ಹೆಚ್ಚಿದ ಅನುದಾನ

ಕಾರವಾರ:2017–18ನೇ ಸಾಲಿನ ಜಿಲ್ಲಾ ಪಂಚಾಯ್ತಿ ಬಜೆಟ್‌ನಲ್ಲಿ ಈ ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒತ್ತು ನೀಡಲಾಗಿದ್ದು, ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ.

ಜಿಲ್ಲಾ ಪಂಚಾಯ್ತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮದಡಿಯಲ್ಲಿ ₹ 41.45 ಕೋಟಿ ಹಾಗೂ ರಾಷ್ಟ್ರೀಯ ಪೌಷ್ಠಿಕ ಆಹಾರ ಯೋಜನೆ ಕಾರ್ಯಕ್ರಮದಡಿ ₹ 36.35 ಕೋಟಿ ಒಟ್ಟೂ ₹ 77.71 ಕೋಟಿ ಅನುದಾನವನ್ನು ಇಡಲಾಗಿದೆ. ಜಿಲ್ಲಾ ಐಸಿಡಿಎಸ್‌ ಘಟಕದ ಒಬ್ಬ ಜಿಲ್ಲಾ ನಿರೂಪಣಾಧಿಕಾರಿ, 8 ಸಿಬ್ಬಂದಿಗೆ ಹಾಗೂ ಬಾಹ್ಯ ಮೂಲ ಸಿಬ್ಬಂದಿಗೆ ವೇತನ ಮತ್ತು ಕಚೇರಿಯ ಸಾದಿಲ್ವಾರು ವೆಚ್ಚಕ್ಕಾಗಿ ₹ 37 ಲಕ್ಷ ಹಾಗೂ ₹ 12 ಲಕ್ಷ ಶಿಶು ಕಲ್ಯಾಣದಡಿ ನಿರ್ಗತಿಕ ಮಕ್ಕಳ ಅನಾಥ ಕುಠೀರದ ನಿರ್ವಹಣೆಗಾಗಿ ಹಾಗೂ ಜಿಲ್ಲಾ ಕಚೇರಿಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕಚೇರಿ ವೆಚ್ಚಕ್ಕಾಗಿ ₹ 56 ಲಕ್ಷಗಳನ್ನು ನಿಗದಿಪಡಿಸಲಾಗಿದೆ.

‘ಒಟ್ಟು 783.88 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮಗಳಿಗೆ 246.54 ಕೋಟಿ, ತಾಲ್ಲೂಕು ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 512.57 ಕೋಟಿ, ಹಾಗೂ ಗ್ರಾಮ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 24.26 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಪಂಚಾಯ್ತಿಯ ಅಧೀನ ಅಧಿಕಾರಿಗಳ ಮತ್ತು ನೌಕರರ ವೇತನಕ್ಕಾಗಿ ₹ 76.63 ಕೋಟಿ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಹಾಗೂ ನೌಕರರ ವೇತನಕ್ಕಾಗಿ ₹ 403.19 ಕೋಟಿ, ಒಟ್ಟು ₹ 479.82 ಕೋಟಿ ಮೀಸಲಿಡಲಾಗಿದೆ.

ಉಳಿದಂತೆ ಇತರೇ ವೆಚ್ಚಕ್ಕಾಗಿ ಜಿಲ್ಲಾ ಪಂಚಾಯ್ತಿಗೆ ₹ 169.91 ಕೋಟಿ, ತಾಲ್ಲೂಕು ಪಂಚಾಯ್ತಿಗೆ ₹ 109.37 ಕೋಟಿ ಇಡಲಾಗಿದೆ. ಕಳೆದ ಸಾಲಿನಲ್ಲಿ ಒದಗಿಸಿದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು 2017-–18ನೇ ಸಾಲಿಗೆ ಒದಗಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಹೇಳಿದರು.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ: ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ಜಿಲ್ಲಾ ಪಂಚಾಯ್ತಿಯಿಂದ ₹ 107.66 ಕೋಟಿ ಹಾಗೂ ತಾಲ್ಲೂಕು ಪಂಚಾಯ್ತಿಯ ಲೆಕ್ಕಶೀರ್ಷಿಕೆಯಡಿ ₹ 369.47 ಕೋಟಿ ಒಟ್ಟೂ ₹ 477.13 ಕೋಟಿಯ ಅನುದಾನವನ್ನು ಒದಗಿಸಲಾಗಿದೆ.

ಅಕ್ಷರ ದಾಸೋಹ ಯೋಜನೆಯಡಿ ಸಿಬ್ಬಂದಿಗಳ ವೇತನಕ್ಕೆ ₹ 1.09 ಕೋಟಿ, ಸರ್ವಶಿಕ್ಷಣ ಯೋಜನೆಯಡಿ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳ 6,533 ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಹಾಗೂ ಕಚೇರಿ ವೆಚ್ಚಕ್ಕಾಗಿ ₹ 261.32 ಕೋಟಿ, 1,319 ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ವೇತನಕ್ಕಾಗಿ ₹ 57.15 ಕೋಟಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಮಾದರಿ ಶಾಲೆಗಳ ಶಿಕ್ಷಕರ ವೇತನಕ್ಕಾಗಿ ₹ 2.76 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.