ADVERTISEMENT

ಶಿಕ್ಷಣ ಸಚಿವರ ಕ್ರಮಕ್ಕೆ ಎಬಿವಿಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:22 IST
Last Updated 23 ಜುಲೈ 2017, 9:22 IST

ಶಿರಸಿ: ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿಬಂಧಿಸುವ ಶಿಕ್ಷಣ ಸಚಿವರ ನಿರ್ಧಾರ ಖಂಡಿಸಿ ಎಬಿವಿಪಿ ಸ್ಥಳೀಯ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಸರ್ಕಾರ ಕಾಲೇಜುಗಳಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಕಾಲೇಜು ಹಂತದಲ್ಲಿ ನಾಯಕತ್ವ ಹೊಂದಿರುವವರು ನಂತರ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ಶಿಕ್ಷಣ ಸಚಿವರ ಪಕ್ಷದಲ್ಲೇ ಇಂತಹವರು ಇದ್ದರೂ ಅವರು ಮರೆತಂತಿದೆ.

ಯುವ ಮತದಾರರ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ನೀಡದೇ ಪ್ರತಿಬಂಧಿಸಲು ಮುಂದಾಗಿದೆ. ಸಂಘಟನೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರವಾಗಿದ್ದರೂ ಸರ್ಕಾರ ನೇರ ನಿರ್ಬಂಧ ಹೇರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ.

ADVERTISEMENT

ಸರ್ಕಾರದ ಈ ಕ್ರಮ ಸಂವಿಧಾನದ ಆಶಯಕ್ಕೆ ಮಾಡಿದ ಅಪಮಾನವಾಗಿದೆ. ಎಬಿವಿಪಿಯನ್ನು ಗುರಿಯಾಗಿಟ್ಟು ಸರ್ಕಾರ ನಿರ್ಬಂಧ ಹೇರಲು ಹೊರಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪೊಲೀಸರೊಂದಿಗೆ ವಾಗ್ವಾದ: ಯಾವುದೇ ಮೆರವಣಿಗೆಯಿಲ್ಲದೆ ತಹಶೀಲ್ದಾರರಿಗೆ ಮನವಿ ಕೊಡುವು ದಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಎಬಿವಿಪಿ ಪ್ರಮುಖರು ನಗರದ ಮಾರಿಗುಡಿ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಬ್ಯಾನರ್‌ನೊಂದಿಗೆ ಉಪ ವಿಭಾಗಾಧಿಕಾರಿ ಕಚೇರಿಗೆ ಮೆರವಣಿಗೆ ಬಂದರು.

ಇದನ್ನು ಪ್ರಶ್ನಿಸಿದ ಸಿಪಿಐ ಕೃಷ್ಣಾನಂದ ನಾಯಕ ಎಬಿವಿಪಿಯ ಪ್ರಮುಖ ವೀರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳನ್ನು ಮೆರವಣಿಗೆಗೆ ಕಳುಹಿಸಿದ ಮಾರಿಗುಡಿ ಕಾಲೇಜಿನ ಪ್ರಾಚಾರ್ಯರಿಗೆ ನೋಟಿಸ್ ನೀಡಲು ಸಿಪಿಐ ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.