ADVERTISEMENT

ಶಿರಸಿಯ ಪೌರ ಕಾರ್ಮಿಕರು ಸಿಂಗಾಪುರಕ್ಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 9:00 IST
Last Updated 21 ಏಪ್ರಿಲ್ 2017, 9:00 IST

ಶಿರಸಿ: ನಗರಸಭೆಯ ನಾಲ್ವರು ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸಕ್ಕೆ ಹೋಗಲು ಅಣಿಯಾಗಿದ್ದಾರೆ. ವಿಮಾನ ಹತ್ತಿ ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುವ ಅವರು ಸರ್ಕಾರ ಪ್ರವಾಸದ ದಿನಾಂಕ ಘೋಷಣೆ ಮಾಡುವುದನ್ನೇ ಕಾಯುತ್ತಿದ್ದಾರೆ.ಘನತ್ಯಾಜ್ಯ ವಿಲೇವಾರಿ, ನಗರ ನೈರ್ಮಲ್ಯೀಕರಣ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ರಾಜ್ಯದಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆಗಳ ಆಯ್ದ ಪೌರಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ಮುಂದಾಗಿದೆ. ರಾಜ್ಯದಿಂದ ಪ್ರವಾಸ ಹೊರಟಿರುವ ಒಟ್ಟು 802 ಪೌರ ಕಾರ್ಮಿಕರಲ್ಲಿ ಶಿರಸಿಯ ಹಿರಿಯ ಪೌರ ಕಾರ್ಮಿಕರಾದ ಅಣ್ಣಪ್ಪ ಶಂಕರ ರಾಜಾ, ಮಾಸ್ತಿ ರಾಮಾ ಭಂಗಿ, ದಿನೇಶ ನಾಣು ಹರಿಜನ, ಚಂದ್ರಕಾಂತ ಗುಡೇಅಂಗಡಿ ಸೇರಿದ್ದಾರೆ.

‘ಈಗಾಗಲೇ ನಾಲ್ವರು ಪೌರಕಾರ್ಮಿಕರಿಗೆ ಪಾಸ್‌ಪೋರ್ಟ್ ಮಾಡಿಸಲಾಗಿದೆ. ಅವರ ಪಾಸ್‌ಪೋರ್ಟ್ ವೆಚ್ಚವನ್ನು ನಗರಸಭೆಯೇ ಭರಿಸಿದೆ. ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋಗುವ ಅವರು ಸಿಂಗಾಪುರದ ಯಾಂತ್ರೀಕೃತ ಸ್ವಚ್ಛತಾ ಕಾರ್ಯ, ಸಾಧಕ ಬಾಧಕಗಳನ್ನು ಸ್ವತಃ ನೋಡಿ ತಿಳಿದುಕೊಂಡು ಬರಲಿದ್ದಾರೆ’ ಎಂದು ನಗರಸಭೆ ಪೌರಾಯಕ್ತ ಮಹೇಂದ್ರಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪೌರ ಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸಲು ವೃತ್ತಿ ಬಾಂಧವರ ಜೊತೆಗೂಡಿ ಎರಡು ಬಾರಿ ಬೆಂಗಳೂರಿಗೆ ಹೋಗಿದ್ದೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಹಾಗೆಯೇ ವಾಪಸ್ಸಾಗಿದ್ದೆವು. ಅದು ಬಿಟ್ಟರೆ ದೊಡ್ಡ ನಗರವನ್ನು ನೋಡಿದ್ದೇ ಇಲ್ಲ. ಈಗ ವಿದೇಶ ಪ್ರವಾಸದ ಭಾಗ್ಯ ದೊರೆತಿದೆ’ ಎಂದು 11 ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅಣ್ಣಪ್ಪ ರಾಜಾ ಹೇಳಿದರು.

ADVERTISEMENT

‘ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಅಕಸ್ಮಾತ್‌ ಆಗಿ ಸಿಕ್ಕಿದೆ. ಸೌಭಾಗ್ಯವೇ ನಮಗೆ ಒದಗಿ ಬಂದಂತಾಗಿದೆ. ಸರ್ಕಾರ ಈ ಅವಕಾಶ ಮಾಡಿಕೊಡದಿದ್ದರೆ ವಿದೇಶ ಪ್ರವಾಸ ನಮಗೆ ಕನಸಿನ ಮಾತಾಗಿತ್ತು’ ಎಂದು ಮಾಸ್ತಿ ರಾಮಾ ಭಂಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.