ADVERTISEMENT

‘ಸಮಾಜ ಪರಿವರ್ತನೆ ಶಿಕ್ಷಕರ ಹೊಣೆ’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:24 IST
Last Updated 6 ಸೆಪ್ಟೆಂಬರ್ 2017, 5:24 IST

ಶಿರಸಿ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ನಿವೃತ್ತರಿಗೆ ಅಭಿನಂದನೆ, ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರ ಸಾಧನೆ ಮಾಡಿದ ಶಾಲೆಗಳ ಪ್ರಮುಖರಿಗೆ ಪುರಸ್ಕಾರ, ಬಯಲುಶೌಚ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಪ್ರತಿಜ್ಞಾ ವಿಧಿ ಸ್ವೀಕಾರದೊಂದಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಇಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಶಿಲ್ಪಿಗಳಾಗಿರುವ ಶಿಕ್ಷಕರ ಬಗ್ಗೆ ಜನರಲ್ಲಿ ಅಪಾರ ಗೌರವ ಇದೆ. ಶಿಕ್ಷಕರು ಸಮಾಜದ ಪರಿವರ್ತನೆಗೆ ಕಾರಣರಾಗಬೇಕು. ಮೌಲ್ಯಗಳ ಅಧಃಪತನ,  ಆದರ್ಶಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಕರ ಹೊಣೆಗಾರಿಕೆ ಹಿಂದಿಗಿಂತ ಹೆಚ್ಚಾಗಿದೆ.

ಬ್ರಿಟಿಷರಿಂದ ಬಳವಳಿಯಾಗಿ ಬಂದಿರುವ ಹಣ ಗಳಿಕೆಯ ಶಿಕ್ಷಣ ಪದ್ಧತಿಯನ್ನು ಮೀರಿದ ಸನ್ಮಾರ್ಗದ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ನೀಡಬೇಕಾಗಿದೆ. ಭವಿಷ್ಯದ ನಾಗರಿಕರಾಗಿ ಮಕ್ಕಳಲ್ಲಿ ಸಮಾಜ ಪರಿವರ್ತಿಸುವ ಛಲ ಬೆಳೆಯಲು ಶಿಕ್ಷಕರು ಪ್ರಾಥಮಿಕ ಹಂತದಲ್ಲೇ ಆ ಬೀಜ ಬಿತ್ತಬೇಕು ಎಂದು ಸಲಹೆ ಮಾಡಿದರು.

ADVERTISEMENT

ಶೈಕ್ಷಣಿಕ ವರ್ಷ ಆರಂಭವಾಗಿ ಅರ್ಧ ವರ್ಷ ಕಳೆದರೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಶಿಕ್ಷಕರ ಸೇವಾವಧಿಯಲ್ಲಿ ಎದುರಾಗಿರುವ ಸಮಸ್ಯೆಗಳ ಅರಿವಿದೆ. ಶಿಕ್ಷಕರ ದಿನಾಚರಣೆಯನ್ನು ಸರ್ಕಾರ ಆಚರಿಸಬೇಕು ಎಂಬ ಶಿಕ್ಷಕರ ಬೇಡಿಕೆ ನ್ಯಾಯಯುತವಾದದ್ದಾಗಿದೆ. ಬರುವ ದಿನಗಳಲ್ಲಿ ಇವೆಲ್ಲ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಶೈಕ್ಷಣಿಕ ಜಿಲ್ಲೆಯ ತಲಾ ಆರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 18 ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಸಾಧನೆ ಮಾಡಿದ ಶಾಲೆಗಳ ಪ್ರಮುಖರು ಪ್ರಶಂಸಾಪತ್ರ ಸ್ವೀಕರಿಸಿದರು. ಗುರು ಚೇತನ ಕಾರ್ಯಕ್ರಮದ ಲೋಗೊವನ್ನು ಬಿಡುಗಡೆಗೊಳಿಸಲಾಯಿತು. ಮಾನಸಿಕ ತಜ್ಞೆ ಮಾಲಾ ಗಿರಿಧರ ಅವರು, ಮಾದಕ ವ್ಯಸನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕುರಿತು ಶಿಕ್ಷಕರಿಗೆ ಉಪನ್ಯಾಸ ನೀಡಿದರು.

ಶಿಕ್ಷಕರ ಬೇಡಿಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಹೆಗಡೆ ಮಾತನಾಡಿ, ‘ಶಿಕ್ಷಕರ ದಿನಾಚರಣೆಗೆ ಆರ್ಥಿಕ ನೆರವು ಸಿಗಬೇಕು. ಶಿಕ್ಷಕರಿಗೆ ಇತರ ಕೆಲಸಗಳನ್ನು ನೀಡದೇ ತರಗತಿ ಕೊಠಡಿಯ ಬಗ್ಗೆ ಹೆಚ್ಚು ಕೇಂದ್ರೀಕರಿಸಲು ಅವಕಾಶ ಮಾಡಿಕೊಡಬೇಕು. ಯೋಜಿತ ಗುರುಭವನಕ್ಕೆ ಜಾಗ ಒದಗಿಸಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯ ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ಉಷಾ ಹೆಗಡೆ, ಪ್ರಭಾವತಿ ಗೌಡ, ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆನಂದ ಧುರಿ, ಡಯಟ್‌ ಪ್ರಾಚಾರ್ಯ ಹಫೀಸ್‌ ಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಶಿಕ್ಷಕರ ಸಂಘದ ಪ್ರಮುಖರಾದ ಎಂ.ಎಚ್. ನಾಯ್ಕ, ನಾರಾಯಣ ನಾಯ್ಕ, ದಿನೇಶ ನಾಯ್ಕ, ನಾರಾಯಣ ದೈಮನೆ ಇದ್ದರು. ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ್ ಸ್ವಾಗತಿಸಿದರು. ಶ್ರೀಪಾದ ಭಟ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.