ADVERTISEMENT

ಸಾತನಬೈಲಿನಲ್ಲಿ ‘ಸಿದ್ದಿನ್ಯಾಸ’ ಜಾತ್ರೆ 27ರಂದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 10:57 IST
Last Updated 25 ಏಪ್ರಿಲ್ 2014, 10:57 IST

ದಾಂಡೇಲಿ: ಆಫ್ರಿಕಾದಿಂದ ಬಂದು ಇಲ್ಲಿ ನೆಲೆನಿಂತ ನಿಗ್ರೊ ಸಿದ್ದಿಗಳು ತಮ್ಮ ಅಸ್ವಿತ್ವಕ್ಕಾಗಿ ತಮ್ಮದೇ ಆದ ಜಾತ್ರೆಯನ್ನು ಈ ನೆಲದಲ್ಲಿ ಸೃಷ್ಟಿಸಿದ್ದಾರೆ. ಇದೇ 27ಕ್ಕೆ ಅಂಕೋಲಾ ತಾಲ್ಲೂಕಿನ ಸಾತನಬೈಲಿನಲ್ಲಿ ಸಿದ್ದಿಗಳದ್ದೇ ಆದ ವಿಶಿಷ್ಟ ಜಾತ್ರೆಯನ್ನು ಏರ್ಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡ ಭಾಗಗಳಲ್ಲಿ ಸಂಚರಿಸಿದವರಿಗೆ ಸಿದ್ದಿಯರು ಸಾಮಾನ್ಯವಾಗಿ ಕಾಣಸಿಗುತ್ತಾರೆ.

ಗೋವಾ ಭಾಗದಲ್ಲಿ ಗುಲಾಮಗಿರಿಗಾಗಿ ಹೊತ್ತುತಂದ ಈ ಕರಿಜನರನ್ನು ಪೊರ್ಚುಗೀಸರು ಉ.ಕ. ಜಿಲ್ಲೆಯ ತೋಟದೊಡೆಯರಿಗೆ ಮಾರಿ ಹೋದರು.  ಬರುವಾಗ ಭಾಷೆ, ದೇಶ, ಜಾತಿ, ದೈವ, ಜನಪದ, ಹಾಡು, ಕುಣಿತ, ನೆಮ್ಮದಿ, ಕನಸುಗಳ ಸರ್ವಸ್ವವನ್ನು ಕಳೆದುಕೊಂಡು ಬೆತ್ತಲಾಗೇ ಬಂದವರನ್ನೂ ಯಾರು ಕೊಂಡರೋ, ಯಾರು ಜೀತಕ್ಕಿಟ್ಟುಕೊಂಡರೋ ಅವರ ಧರ್ಮವನ್ನೇ ತಬ್ಬಿಕೊಂಡು ಆಫ್ರಿಕಾದ ‘ಸಿದಿಮೊ’ ಪಂಗಡದಿಂದ ಮತಾಂತರ ಹೊಂದಿ ಭಾರತೀಯ ಹಿಂದೂ, ಕ್ರೈಸ್ತ, ಮುಸಲ್ಮಾನರಾಗಿ ಅನಿವಾರ್ಯವಾಗಿ ಪರಿವರ್ತನೆಯಾದರು. ಸದ್ಯಕ್ಕೆ ಸಿದ್ದಿಗಳೆಂದು ಕರೆಸಿಕೊಳ್ಳುವ ಇವರನ್ನು ಸರ್ಕಾರ 2003ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು ಒಂದು ಪುಣ್ಯದ ಕೆಲಸ.

ಸರ್ವಸ್ವವನ್ನು ಕಳೆದುಕೊಂಡರೂ ಸಿದ್ದಿಗಳು ತಮ್ಮ ನೋವು ಮರೆಯಲು ‘ಡಮಾಮಿ’ ಕುಣಿತ ಬಿಡಲಿಲ್ಲ. ‘ಡಮಾಮಿ’ ಎನ್ನುವುದು ಆಫ್ರಿಕಾದ ಒಂದು ವಾದನ. ಇದರ ಜೊತೆ ಆಫ್ರಿಕಾದೇಶದಿಂದ ಇವರು ಬರುವಾಗ ಜಿಂಜಿಬಾರ್ ದ್ವೀಪದಲ್ಲಿರುವ ‘ನ್ಯಾಸ’ ಸರೋವರದಲ್ಲಿ ತಾವು ಪೂಜಿಸುತ್ತಿದ್ದ ಕರಿಗುಂಡುಕಲ್ಲನ್ನು ಜೊತೆಗೆ ತಂದಿದ್ದರು. ಅವರು ಎಲ್ಲೆಲ್ಲಿ ಜೀತಕ್ಕೆ ರವಾನೆಯಾಗುತ್ತಾರೋ ಅಲ್ಲೆಲ್ಲ ತೆಗೆದುಕೊಂಡು ರಕ್ಷಿಸಿಟ್ಟು, ನಂತರ ಶಿವಾಜಿ ಮಹಾರಾಜನ ಕಾಲದಲ್ಲಿ ಯಾಣದಲ್ಲಿದ್ದು ನಂತರ ಸಾತನಬೈಲಿಗೆ ಬಂದ ಸಿದ್ದಿ ‘ಡಬಗುಳಿ’ ಮನೆತನ ಕರಿಗುಂಡುಕಲ್ಲನ್ನು ಇಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಹಿನ್ನೆಲೆಯನ್ನು ಸ್ಥಳೀಯ ಇಡಗುಂದಿ ಡಬಗುಳಿ ಮನೆತನದ ಪುಟ್ಟಸಿದ್ದಿ ಮತ್ತು ಸಾಣುಶಿವಾ ಸಿದ್ದಿ ಹೇಳುತ್ತಾರೆ.

ಈ ಜಾತ್ರೆಯ ವಿಶೇಷತೆ ಎಂದರೆ ಪೂರ್ಣ ಜಾತ್ರೆ ಸಿದ್ದಿಗಳಿಂದಲೇ ಜರುಗುತ್ತದೆ. ಇಲ್ಲಿಯ ಪೂಜಾರಿ, ಅಡುಗೆ ಮಾಡುವವರು, ಅಂಗಡಿಗಳನ್ನು ಇಡುವವರು, ಕುರಿ ಕೋಳಿ ತಂದು ಬಲಿ ಕೊಡುವವರು, ಜಾತ್ರೆಗಾಗಿ ಬರುವವರು ಎಲ್ಲರೂ ಸಿದ್ದಿಗಳೇ ಆಗಿರುತ್ತಾರೆ.

‘ಸಿದ್ದಿನ್ಯಾಸ’ ಕರಿಕಲ್ಲಿನ ಪಕ್ಕದಲ್ಲಿ ‘ಕೀಳನ್ಯಾಸ’ ಕಲ್ಲುಗುಂಡು ಇದೆ. ಇದು ಸಿದ್ದಿನ್ಯಾಸನ ಬಂಟನಂತೆ. ಈ ಕೀಳನಿಗೆ ನೋಟ ಹೊಡೆಯುತ್ತಾರೆ ಅಂದರೆ ಅಕ್ಕಿ ಹಾಕಿ ನೋಡುವುದು. ಆಗ ಅದರಲ್ಲಿ ಕಳೆದು ಹೋದುದನ್ನು ಹುಡುಕಿಕೊಡುತ್ತದೆಂಬುದು ಇವರ ನಂಬಿಕೆಯಾಗಿದೆ.

ಸಿದ್ದಿನ್ಯಾಸ ವಿಶೇಷತೆ ಎಂದರೆ ಬೆಳಿಗ್ಗೆ ‘ಡಬಗುಳಿ’ ಮನೆತನದ ಪೂಜಾರಿ ಪೂಜೆ ಸಲ್ಲಿಸುತ್ತಾನೆ. ಭಕ್ತರು ತಂದ ಕೋಳಿಗಳನ್ನು ಹರಕೆಯ ರೂಪದಲ್ಲಿ ಬಲಿ ಕೊಡಲಾಗುತ್ತದೆ. ತಮ್ಮ ರೋಗ ರುಜಿನ, ಮದುವೆ, ಜಮೀನು ವ್ಯಾಜ್ಯ, ಜನಸಾಮಾನ್ಯರು ತೊಂದರೆಗಳುಗೆ ಕಟ್ಟಿಕೊಂಡ ಹರಕೆಗಾಗಿ ಬಲಿ ಕೊಡಲಾಗುತ್ತದೆ. ಬಲಿ ಕೊಡಲಾದ ಕೋಳಿಯ ಅಡುಗೆ ಮಾಡಿ ದೇವರಿಗೆ ಎಡೆ ಮಾಡಿ ಜಪಿಸುತ್ತಾರೆ.

ಸಿದ್ದಿ ಭಕ್ತರು ತಂದ ಬಾಳೆಗೊನೆ, ಭತ್ತ, ಹಣ್ಣು ಹಂಪಲುಗಳನ್ನು ನೈವೇದ್ಯಕ್ಕಿಟ್ಟು ಹರಾಜು ಮಾಡಲಾಗುತ್ತದೆ. ಸಂಜೆ ಪ್ರಸಾದವಾಗುತ್ತಿದ್ದಂತೆ ಆಫ್ರಿಕಾ ಮೂಲದ ಡಮಾಮಿ ಡ್ರಮ್ ಬೀಟ್ ಕಾಡಿನಲ್ಲಿ ಡಂ ಡಂ ಡಮ್ಕು ಡಂ.. ಎಂದು ಶುರುವಾಗುತ್ತದೆ. ಪ್ರತಿ ಹಳ್ಳಿಗಳಿಂದ ಸುಮಾರು 20-–30 ಡಮಾಮಿ ತಂಡಗಳು ಮಕ್ಕಳು, ಮಹಿಳೆ, ಪುರುಷ ಹಿರಿಯರೆನ್ನದೆ ಎಲ್ಲರೂ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಇಡೀ ದಿನ ಬೆಳಗಾಗುವರೆಗೂ ಸಿದ್ದಿಗಳ ಡಮಾಮಿ ನೃತ್ಯ ನಡೆಯುತ್ತಿರುತ್ತದೆ. ಇದರ ಜೊತೆಗೆ ಸಿದ್ದಿಗಳದ್ದೇ ಆದ ಪುಗಡಿ ಜಾನಪದ ಹಾಡುಗಳು, ಸಂಗ್ಯಾ ಬಾಳ್ಯಾ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಬೆಳಗಿನವರೆಗೆ ಜರುಗುತ್ತಿರುತ್ತವೆ.

ಮರದಲ್ಲಿ ದೇವರಿದ್ದಾನೆ...
ಹಿಂದೂ, ಮುಸ್ಲಿಂ, ಕ್ರೈಸ್ತ ಸಾಮರಸ್ಯದ ವಿಶೇಷ ಜಾತ್ರೆಯಿದು  ಡಬಗುಳಿ ಸಿದ್ದಿ ಮನೆತನಕ್ಕೆ ಸೀಮಿತವಾಗಿ ಅಂಕೋಲಾ ತಾಲ್ಲೂಕಿನ ಸಾತನಬೈಲಿನ ಅಕ್ಕಪಕ್ಕದ ಹಳ್ಳಿಗಳಿಗೆ ಸೀಮಿತವಾಗಿದ್ದ ಈ ಸಿದ್ದಿ ಹಬ್ಬದಲ್ಲಿ ಪೂಜೆ ನಂತರ ಡಬಗುಳಿ ಪೂಜಾರಿಗಳೆನಿಸಿದವರು ಪಕ್ಕದ ಹಳ್ಳದಾಟಿ ಓಡಿ ಒಂದು ಮರಕ್ಕೆ ಕರ್ಪೂರ ಹಚ್ಚಿ ದೀಪ ಬೆಳಗಿಸಿ ಊದಿನಕಡ್ಡಿ  ಹಚ್ಚಿ ಜೋರಾಗಿ ಮರದ ಜೊತೆ ಸಂಭಾಷಣೆ ನಡೆಸಿ, ಮಂಡಿಯೂರಿ ಮರಕ್ಕೆ ನಮಸ್ಕರಿಸಿ ಹಿಂದಿರುಗುವ ಪರಿಪಾಠವಿದೆ. ಇದರ ವಿಶೇಷವೆನೆಂದರೇ ಪೂಜೆಗೊಳಪಡುವ ಮರದಲ್ಲಿ ಪಕೀರನಿದ್ದಾನೆ ಎಂಬ ನಂಬಿಕೆಯಡಿ ಸಿದ್ದಿ ನೈವೇದ್ಯ ಸಲ್ಲಿಸಲಾಗುತ್ತದೆ.

ಇದರ ಜೊತೆಯಲ್ಲಿಯೆ ಅಲ್ಲೆ ಮತ್ತೊಂದು ಮರದಲ್ಲಿ ಬಿಷಪ್‌ನಿದ್ದಾನೆ ಎಂಬ ಪ್ರತೀತಿಯಡಿ ಅದಕ್ಕೂ ನೈವೇದ್ಯ ಸಲ್ಲಿಸಲಾಗುತ್ತದೆ. ಈ ರೀತಿಯ ಒಂದು ವೈಶಿಷ್ಟ್ಯ ಹಬ್ಬ ಇನ್ನಷ್ಟು ವ್ಯವಸ್ಥಿತವಾಗಿ ನಡೆದು ಸಂಸ್ಕೃತಿಯನ್ನು ಕಳೆದುಕೊಂಡ ಸಮುದಾಯ ತನ್ನದೇ ಆದ ಸಂಸ್ಕೃತಿಯನ್ನು ಸಿದ್ದಿನ್ಯಾಸಾ ಜಾತ್ರೆಯ ಮೂಲಕ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ‘ಗ್ರೀನ್ ಇಂಡಿಯಾ ಗಿರಿಜನ ಅಭಿವೃದ್ಧಿ ಸಂಸ್ಥೆ’ ಸಿದ್ದಿನ್ಯಾಸ ಕಮಿಟಿ ರಚಿಸಿದೆ. ಗೌರವಾಧ್ಯಕ್ಷರಾಗಿ ಡಿಯಾಗೊ ಸಿದ್ದಿ, ಅಧ್ಯಕ್ಷ ರಾಗಿ ಜುಮ್ಮಾ ಸಿದ್ದಿ,  ಕಾರ್ಯದರ್ಶಿಯಾಗಿ ಇಮಾಮ ಸಾಬ ಸಿದ್ದಿ ಕಮಿಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.