ADVERTISEMENT

ಸಾರ್ವಜನಿಕರಿಗಿಲ್ಲ ಶೌಚಾಲಯ ಸೌಲಭ್ಯ

ಮಿನಿ ವಿಧಾನಸೌಧಕ್ಕೆ ಕಪ್ಪುಚುಕ್ಕೆ; ನೀರಿಲ್ಲದೇ ನಾರುತ್ತಿರುವ ಮೂತ್ರಾಲಯ, ಅಸಹ್ಯ ಹುಟ್ಟಿಸುತ್ತಿರುವ ಸ್ಥಳ

ಸಂಧ್ಯಾ ಹೆಗಡೆ
Published 16 ಜನವರಿ 2017, 8:23 IST
Last Updated 16 ಜನವರಿ 2017, 8:23 IST
ಶಿರಸಿಯ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಶೌಚಾಲಯದಲ್ಲಿ ಪುರುಷರ ಮೂತ್ರಿ ನೀರಿಲ್ಲದೇ ಗಬ್ಬೆದ್ದು ಹೋಗಿರುವುದು
ಶಿರಸಿಯ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಶೌಚಾಲಯದಲ್ಲಿ ಪುರುಷರ ಮೂತ್ರಿ ನೀರಿಲ್ಲದೇ ಗಬ್ಬೆದ್ದು ಹೋಗಿರುವುದು   

ಶಿರಸಿ: ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಗರಕ್ಕೆ ಶೋಭೆಯಂತಿರುವ ಮಿನಿ ವಿಧಾನ ಸೌಧಕ್ಕೆ ಅಲ್ಲಿರುವ ಶೌಚಾಲಯ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಕಂದಾಯ ಇಲಾಖೆ ಕಾರ್ಯಗಳಿಗೆ ಬರುವ ಗ್ರಾಮೀಣ ಜನರು ದೇಹಬಾಧೆ ತೀರಿಸಿ ಕೊಳ್ಳಲು ಹೋದರೆ ನೀರಿನಲ್ಲದೇ ನಾರುವ ಮೂತ್ರಿಗಳು ಅಸಹ್ಯ ಹುಟ್ಟಿಸುವಂತಿವೆ.

ತಹಶೀಲ್ದಾರ್ ಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಆಹಾರ ಇಲಾಖೆ ಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕೆ ಹಿಂಭಾಗದಲ್ಲಿ ಶೌಚಾ ಲಯ ನಿರ್ಮಿಸಲಾಗಿದೆ. ಈ ಶೌಚಾಲ ಯದಲ್ಲಿ ಪುರುಷರು ಹಾಗೂ ಮಹಿಳೆ ಯರಿಗೆ ಪ್ರತ್ಯೇಕ ವ್ಯವಸ್ಥೆಯೂ ಇದೆ.

ಆದರೆ ಮಹಿಳಾ ಶೌಚಾಲಯದ ಬಾಗಿಲು ತೆರೆಯದೇ ಅನೇಕ ತಿಂಗಳು ಗಳು ಕಳೆದಿವೆ ಎಂಬುದಕ್ಕೆ ಸಾಕ್ಷಿಯಾಗಿ ಬಾಗಿಲಿಗೆ ಹಾಕಿರುವ ಬೀಗ ತುಕ್ಕು ಹಿಡಿದಿದೆ.

ಪುರುಷರ ವಿಭಾಗದಲ್ಲಿ ಎರಡು ಮೂತ್ರಿಗಳು, ಶೌಚಾಲಯ ಇದೆ. ಇಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ದಾರಿ ಯಲ್ಲಿ ಹಾದು ಹೋಗುವವರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಿದೆ. ‘ಪಹಣಿ ಪತ್ರಿಕೆ ಪಡೆಯಲು ತಹಶೀ ಲ್ದಾರ್ ಕಚೇರಿಗೆ ಬಂದರೆ ಒಮ್ಮೊಮ್ಮೆ 3–4 ತಾಸು ಕಾದು ನಿಲ್ಲಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ನಿಸರ್ಗದ ಕರೆಗೆ ಶೌಚಾಲಯಕ್ಕೆ  ಹೋದರೆ ವಾಕರಿಕೆ ಬರುತ್ತದೆ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಒಡೆದಿರುವ ಪೈಪ್‌ನಿಂದ ನೀರು ಬರುವುದಿಲ್ಲ. ಅಸಹ್ಯ ಹುಟ್ಟಿಸುವ ಸ್ಥಿತಿಯಲ್ಲಿದ್ದರೂ ಜನರಿಗೆ ಶೌಚಾಲಯಕ್ಕೆ ಹೋಗುವುದು ಅನಿವಾರ್ಯ’ ಎನ್ನುತ್ತಾರೆ ರೈತ ಗಣಪತಿ ಹೆಗಡೆ.

‘ನಿತ್ಯವೂ ನೂರಾರು ಜನರು ಮಿನಿ ವಿಧಾನಸೌಧಕ್ಕೆ ಭೇಟಿ ನೀಡುತ್ತಾರೆ. ಹಳ್ಳಿಯಿಂದ ಬಂದ ಜನರಿಗೆ ಕಚೇರಿಯ ಆವರಣದಲ್ಲಿರುವ ಶೌಚಾಲಯ ಅವ ಲಂಬಿಸುವುದು ಅನಿವಾರ್ಯ ವಾಗು ತ್ತದೆ. ಮೂಗಿಗೆ ದುರ್ವಾಸನೆ ಬಡಿಯು ತ್ತಿದ್ದರೂ ಗೊಣಗಿಕೊಂಡು ಅಲ್ಲಿಗೆ ಹೋಗುತ್ತಾರೆ. ಇಷ್ಟು ದೊಡ್ಡ ಕಟ್ಟಡಕ್ಕೆ ಕಪ್ಪುಚುಕ್ಕೆಯಂತಿರುವ ಶೌಚಾಲಯದ ದುರವಸ್ಥೆಯನ್ನು ಸರಿಪಡಿಸಬೇಕು’ ಎಂದು ಅವರು ಹೇಳಿದರು.

ಈ ಕುರಿತು ತಹಶೀಲ್ದಾರ್ ಬಸಪ್ಪ ಪೂಜಾರಿ ಅವರ ಗಮನ ಸೆಳೆದಾಗ ‘ಕಚೇರಿ ಹೊರಗೆ ಪ್ರತ್ಯೇಕ ಕಟ್ಟಡದಲ್ಲಿ ಶೌಚಾಲಯವಿದೆ. ಕಿಡಿಗೇಡಿಗಳು  ಬಾಗಿಲು ಮುರಿದು ನೀರಿನ ಪೈಪ್‌ ಒಡೆದು ನಳಗಳನ್ನು ಕಿತ್ತುಹಾಕಿ ಹೋಗುತ್ತಾರೆ. ಈಗಾಗಲೇ 2–3 ಬಾರಿ ಇಂತಹುದೇ ಪ್ರಕರಣಗಳು ನಡೆದಿವೆ.

ADVERTISEMENT

ಒಂದು ತಿಂಗಳ ಹಿಂದೆ ₹ 20ಸಾವಿರ ವೆಚ್ಚ ಮಾಡಿ ದುರಸ್ತಿಗೊಳಿಸಲಾಗಿತ್ತು’ ಎಂದರು. ‘ಕಟ್ಟಡಕ್ಕೆ ಸೂಕ್ತ ರಕ್ಷಣೆ ಮಾಡಿ ದುರಸ್ತಿಗೊಳಿಸುತ್ತೇವೆ. ಪೈಪ್, ನಳ ಅಳವಡಿಸಿ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಪೈಪ್ ಒಡೆದ ಕಾರಣಕ್ಕಾಗಿ ಅಲ್ಲಿನ ನೀರು ಇಲ್ಲದೇ ಶೌಚಾಲಯ ಸಧ್ಯ ದುಃಸ್ಥಿತಿಯಲ್ಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಶೌಚಾಲಯದ ದುರಸ್ತಿ ಗಮನಕ್ಕೆ ಬಂದಿದ್ದು ಶೀಘ್ರ ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
-ಬಸಪ್ಪ ಪೂಜಾರಿ,
ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.