ADVERTISEMENT

ಸೀಬರ್ಡ್‌ ನಿರಾಶ್ರಿತರಿಗೆ ಪರಿಹಾರ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 6:51 IST
Last Updated 26 ಜುಲೈ 2017, 6:51 IST

ಕಾರವಾರ: ‘ಸೀಬರ್ಡ್ ನಿರಾಶ್ರಿತರಿಗೆ ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಭೂ ಪರಿಹಾರ ವಿತರಣೆ ಮಾಡಲು ರಕ್ಷಣಾ ಇಲಾಖೆ ಜತೆ ಮಾತುಕತೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕಾರವಾರ– ಅಂಕೋಲಾ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆಯ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಮನವಿ ಸಲ್ಲಿಸಿದರು.

‘ಕಾರವಾರ– ಅಂಕೋಲಾ ತಾಲ್ಲೂಕಿನ ಸಮುದ್ರ ತೀರದ13 ಗ್ರಾಮಗಳು ಸೀಬರ್ಡ್‌ ನೌಕಾನೆಲೆ ಯೋಜನೆಗೆ ಸ್ವಾಧೀನಗೊಂಡು 10 ಸಾವಿರಕ್ಕೂ ಅಧಿಕ ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡವು. 30 ಸಾವಿರಕ್ಕೂ ಅಧಿಕ ಮಂದಿ ಇದರಿಂದ ನಿರಾಶ್ರಿತರಾಗಿ ಈಗ ಪರಿಹಾರಕ್ಕಾಗಿ ಅಲೆದಾಡಿ ನಿರ್ಗತಿಕರಾಗಿದ್ದಾರೆ. ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಇಲ್ಲಿನ ಜನತೆ ಬೀದಿಗೆ ಬಂದಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ತಮ್ಮ ಕಚೇರಿಯಲ್ಲಿ 28(ಎ)ದಲ್ಲಿ ದಾಖಲಾಗಿರುವ 1,500 ಪ್ರಕರಣಗಳಲ್ಲಿ ಬಾಕಿ ಉಳಿದಿರುವ ಎಲ್ಲವನ್ನೂ ಇತ್ಯರ್ಥ ಪಡಿಸಬೇಕು. ಜತೆಗೆ ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ನೌಕರಿ ಅಥವಾ ಅವರಿಗಾಗಿಯೇ ವಿಶೇಷ ಪ್ಯಾಕೇಜ್, ನೌಕಾನೆಲೆಯ ನೇಮಕಾತಿಯಲ್ಲಿ ಪ್ರಾಶಸ್ತ್ಯ ನೀಡಬೇಕು ಎಂದರು.

ADVERTISEMENT

ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಮಾಡಬೇಕು. ಅಂಕೋಲಾದ ಹಟ್ಟಿಕೇರಿಯ ವಿನಾಯಕ ಹೆಂಚಿನ ಕಾರ್ಖಾನೆಯಿಂದ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಚಿತ್ತಾಕುಲಾ ಪುನರ್ವಸತಿ ಕೇಂದ್ರಕ್ಕೆ ಜಮೀನು ತ್ಯಾಗ ಮಾಡಿರುವ ಕುಟುಂಬದವರನ್ನು ನಿರಾಶ್ರಿತರೆಂದು ಪರಿಗಣಿಸಬೇಕು.

ಅವರಿಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ ಒತ್ತಾಯಿಸಿದರು.  ಸಂಘದ ಅಧ್ಯಕ್ಷ ಬಿ.ಹೊನ್ನಪ್ಪ ಭಾವಿಕೇರಿ, ಗೌರವಾಧ್ಯಕ್ಷ ಪ್ರಭಾಕರ ರಾಣೆ, ಗಣಪತಿ ಮಾಂಗ್ರೆ, ಕೆ.ಆರ್.ನಾಯಕ, ರಾಜೀವ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.