ADVERTISEMENT

ಹಣ ಮಂಜೂರಾದರೂ ಆಗಿಲ್ಲ ಸೇತುವೆ!

ಕುಂಡಲ್‌ ಗ್ರಾಮಕ್ಕೆ ದೋಣಿಯೇ ಸಂಪರ್ಕದ ಕೊಂಡಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 9:28 IST
Last Updated 28 ಜುಲೈ 2014, 9:28 IST

ದಾಂಡೇಲಿ: ಜೊಯಿಡಾ ತಾಲ್ಲೂಕಿನ ಕುಂಡಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸಬೇಕೆಂದರೆ ಹರಸಾಹಸವೇ ಪಡಬೇಕು. ಅಪ್ಪರ್‌ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ದೋಣಿ ಮಾತ್ರ ಗ್ರಾಮಕ್ಕೆ ಸಂಪರ್ಕ ಸಾಧನ. ಕಳೆದ ಮೂರು ವರ್ಷಗಳ ಹಿಂದೆ ಸೇತುವೆಗೆ ಹಣ ಮಂಜೂರಾದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಹಾಗಾಗಿ ಈ ಭಾಗದ ಸಾರ್ವಜನಿಕರ ದಯನೀಯ ಪರಿಸ್ಥಿತಿ ಕೊನೆಗೊಳ್ಳದಾಗಿದೆ.

ಕುಂಡಲ್ ಗ್ರಾಮ ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ.ದೂರದಲ್ಲಿದ್ದು, ಗೋವಾ ಗಡಿಗೆ ಒಂದೇ ಕಿ.ಮೀ.ನಷ್ಟು ಹತ್ತಿರವಿರುವ ಕುಣಬಿ ಬುಡಕಟ್ಟು ಹಳ್ಳಿ. ಈ ಹಿಂದೆ ಕುಂಬಿರಾಯ ಎಂಬ ಸಾಮಂತ ಆಡಳಿತ ಮಾಡಿದ್ದಕ್ಕೆ ಮತ್ತು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ಸೈನಿಕರಿಂದ ತಲೆಮರೆಸಿಕೊಂಡು ಬಂದಿದ್ದ ಚೆನ್ನಬಸವೇಶ್ವರ, ಅಕ್ಕನಾಗಮ್ಮ ಹಾಗೂ ಇತರ ಶರಣರಿಗೆ ಮತ್ತು ವಚನ ಸಾಹಿತ್ಯ ಸಂರಕ್ಷಿಸಿದ್ದಕ್ಕೆ ಉಳವಿಯ ಇತಿಹಾಸದ ಕುರುಹುಗಳು ಸಾಕ್ಷಿಯಾಗಿದೆ. ಭಾರತ ಸ್ವಾತಂತ್ರ ಪೂರ್ವದಲ್ಲಿ ಕುಂಡಲವನ್ನು ಬ್ರಿಟಿಷರು ಕೇಂದ್ರ ಮಾಡಿಕೊಂಡು ಪೋರ್ಚುಗೀಸರಿಂದ ಗೋವಾ ಗಡಿ ಕಾಯುತ್ತಿರುವುದಕ್ಕೆ ಇಂದಿಗೂ ಬ್ರಿಟಿಷ್ ಐ.ಬಿ, ಚೌಕಿಗಳು ಸಾಕ್ಷಿಯಾಗಿ, ಪ್ರವಾಸಿತಾಣವಾಗಿಯೂ ಗಮನ ಸೆಳೆಯುತ್ತಿದೆ.

1986ರಲ್ಲಿ ಕೆಪಿಸಿಯಿಂದ ಕಾನೇರಿ ನದಿಗೆ ಕಟ್ಟಲಾದ ಜಲಾಶಯದ ಹಿನ್ನೀರಿನಿಂದ ಝಾಲಾವಳಿಯಲ್ಲಿ ಈ ಭಾಗದ ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಸುತ್ತಲಿನ ಘಟ್ಟಾವ, ಕುರಾವಳಿ, ನವರ, ಕುಂಡಲ್. ಆಂಬಾಳ, ಕೇಲೋಲಿ ಗ್ರಾಮಗಳ ಸಂಪರ್ಕದ ಕೊಂಡಿಯಾದ ಲೋಕೋಪಯೋಗಿ ಇಲಾಖೆಯ ಗೋವಾ ಗಡಿ ರಸ್ತೆ ಪ್ರತಿ ವರ್ಷ ಮಳೆಗಾಲಕ್ಕೆ ಇಲ್ಲಿ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಜಲಾಶಯದ ಹಿನ್ನೀರಿಗೆ ವರ್ಷದ ಆರು ತಿಂಗಳು ದೋಣಿ ಮೂಲಕವೇ ಸಂಪರ್ಕ ಸಾಧಿಸುವ ಪರಿಸ್ಥಿತಿ ಇದೆ.

ಪ್ರಾರಂಭಗೊಳ್ಳದ ಕಾಮಗಾರಿ: ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಿಂದ ಭಾಗಶಃ ಮುಳುಗಡೆಯಾಗಿ ಉಳಿದ ಗ್ರಾಮಸ್ಥರ ಸಂಪರ್ಕದ ಅನುಕೂಲಕ್ಕೆ ಮತ್ತು ಈ ರಸ್ತೆ ಗೊವಾ ಗಡಿವರೆಗಿನ ಜಿಲ್ಲಾ ಪ್ರಮುಖ ರಸ್ತೆಯಾಗಿರುವುದರಿಂದ ಲೋಕೋಪಯೋಗಿ ಇಲಾಖೆಯಿಂದ ಸಾರ್ವಜನಿಕರ ಬೇಡಿಕೆಯಂತೆ 2011ರಲ್ಲಿ ₨ 2.40 ಕೋಟಿ ಅನುದಾನ ಮಂಜೂರಾಗಿದೆ. ಇದರಿಂದಾಗಿ ಆ ಭಾಗದ ಸಂಪರ್ಕದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಸೇತುವೆ ಕಾಮಗಾರಿ ಪ್ರಾರಂಭವಾಗದೆ ಈ ನಿರೀಕ್ಷೆ ಹುಸಿಯಾದಂತಾಗಿದೆ.

ಬಲು ಕಷ್ಟ: ಅಪ್ಪರ ಕಾನೇರಿ ಜಲಾಶಯ ಹಿನ್ನೀರಿಗೆ ದೋಣಿ ವ್ಯವಸ್ಥೆ ಕಲ್ಪಿಸಿರುವುದರಿಂದ ಹಿನ್ನೀರು ಮಳೆಯಾದಂತೆ ಹೆಚ್ಚಾಗಿ, ಮಳೆ ಕಡಿಮೆಯಾದರೆ ಧೀಡಿರನೇ ನೀರು ಕಡಿಮೆಯಾಗುತ್ತದೆ. ಹಾಗಾಗಿ ದೋಣಿಯಲ್ಲಿ ದ್ವಿ ಚಕ್ರವಾಹನಗಳು ತುಂಬಲು ಹರಸಾಹಸವೇ ಪಡಬೇಕಾಗುತ್ತದೆ.

‘ಈ ಭಾಗದಲ್ಲಿ ಮಳೆ ಹೆಚ್ಚಿಗೆ ಬೀಳುವುದರಿಂದ ಅಕಸ್ಮಾತ್ ನೀರು ಹೆಚ್ಚಾಗಿ ಅನೇಕ ಸಲ ದೋಣಿ ಮುಳುಗಿ ಅಪಾಯ ಸಂಭವಿಸುವ ಪರಿಸ್ಥಿತಿಯೂ ಎದುರಾಗಿದೆ ಎನ್ನುತ್ತಾರೆ’ ದೋಣಿ ಚಾಲಕ ರಾಮದಾಸ ವೆಳಿಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.