ADVERTISEMENT

ಹೆಬ್ಬಾವು ರಕ್ಷಣೆಗೆ ‘ಲಿವಿಂಗ್ ವಿತ್ ಪೈಥಾನ್’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:06 IST
Last Updated 21 ಜನವರಿ 2017, 8:06 IST
ಹೆಬ್ಬಾವು ರಕ್ಷಣೆಗೆ ‘ಲಿವಿಂಗ್ ವಿತ್ ಪೈಥಾನ್’
ಹೆಬ್ಬಾವು ರಕ್ಷಣೆಗೆ ‘ಲಿವಿಂಗ್ ವಿತ್ ಪೈಥಾನ್’   

ಶಿರಸಿ: ವಿನಾಶದಂಚಿಗೆ ತಲುಪಿರುವ ದೇಶೀಯ ಹೆಬ್ಬಾವು ತಳಿಗಳ ಸಂರಕ್ಷಣೆಯ ಉದ್ದೇಶದಿಂದ ‘ಲಿವಿಂಗ್ ವಿತ್ ಪೈಥಾನ್’ ಕಾರ್ಯಕ್ರಮ ರೂಪುಗೊಂಡಿದೆ. ಕಾರ್ಯಕ್ರಮದಲ್ಲಿ ಜನಜಾಗೃತಿ, ಹೆಬ್ಬಾವುಗಳ ಸಂರಕ್ಷಣೆ ಮತ್ತು ಹಾವುಗಳ ಮಾಹಿತಿ ಸಂಗ್ರಹಕ್ಕೆ ಕೆಲವು ಉತ್ಸಾಹಿಗಳು ಮುಂದಾಗಿದ್ದಾರೆ.

ಲಿವಿಂಗ್ ವಿತ್ ಪೈಥಾನ್ ಅಭಿಯಾನದ ಪ್ರಮುಖ, ಸರೀಸೃಪಗಳ ಅಧ್ಯಯನಕಾರ ಗೋವಾದ ನಿರ್ಮಲ್ ಕುಲಕರ್ಣಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಲಕರ್ಣಿ ಹೆಬ್ಬಾವು ಸಂರಕ್ಷಣೆ ಉದ್ದೇಶದ ಕುರಿತು ಮಾಹಿತಿ ನೀಡಿದರು.

ದೇಶದಲ್ಲಿರುವ ಇಂಡಿಯನ್ ರಾಕ್ ಪೈಥಾನ್, ಬರ್ಮಿಸ್ ಪೈಥಾನ್, ರೆಟಿಕ್ಯುಲೆಟೆಡ್ ಪೈಥಾನ್ ಈ ಮೂರು ಜಾತಿಯ ಹೆಬ್ಬಾವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಹೆಬ್ಬಾವಿನ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.

ಜಗತ್ತಿನ ಅತ್ಯಂತ ಉದ್ದವಾದ ಸರೀಸೃಪ ಅನಕೊಂಡ ಎಂಬ ಭಾವನೆ ಇದೆ. ಆದರೆ ಇದು ತಪ್ಪು ತಿಳಿವಳಿಕೆಯಾಗಿದ್ದು ಭಾರತದ ರೆಟಿಕ್ಯುಲೆ ಟೆಡ್ ಪೈಥಾನ್ ಈ ಸ್ಥಾನದ ಲ್ಲಿದೆ. ಅಂಡಮಾನ್ ನಿಕೋಬಾರ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಾವು ಸುಮಾರು 12 ಮೀಟರ್‌ಗಿಂತಲೂ ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ ಇಂತಹ ಸರೀಸೃಪಗಳು ಆತ್ಮ ಸಂರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತವೆ. ಹೀಗಾಗಿ ಕೆಲವೊಮ್ಮೆ ಮನುಷ್ಯನ ಮೇಲೆ ಆಕ್ರಮಣ ಮಾಡುತ್ತವೆ ಎಂದರು.

ಇಂತಹ ಸರೀಸೃಪಗಳ ಕುರಿತಾಗಿ ಜನರಿಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ನೋಡಿದೊಡನೆ ಹೆದರಿ ಕೊಲ್ಲಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಲಿವಿಂಗ್ ವಿಥ್ ಪೈಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವನ್ನು ಸಂಸ್ಥೆ  ಮಾಡುತ್ತಿದೆ ಎಂದರು.

ಟ್ರೆಕ್ ಸಂಸ್ಥೆಯ ಪ್ರಮುಖ ಸುಹಾಸ ಹೆಗಡೆ ಮಾತನಾಡಿ, ಪರಿಸರ ಸಮತೋಲನದಲ್ಲಿ ಹೆಬ್ಬಾವಿನ ಕೊಡುಗೆ ಅಪಾರವಾಗಿದೆ. ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಅನಿಯಂತ್ರಿತ ವಾಗಲು ಹೆಬ್ಬಾವಿನ ವಿನಾಶ ಪ್ರಮುಖ ಕಾರಣವಾಗಿದೆ. ಹಾವುಗಳ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ಸಂರಕ್ಷಿಸುವ ಕಾರ್ಯ ಆಗಬೇಕು ಎಂದರು. ಪರಿಸರ ಪ್ರೇಮಿ ಇಮ್ರಾನ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.