ADVERTISEMENT

₹ 517 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:15 IST
Last Updated 7 ಡಿಸೆಂಬರ್ 2017, 9:15 IST
₹ 517 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಇಂದು
₹ 517 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಇಂದು   

ಹಳಿಯಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಡಿ.7) ಪಟ್ಟಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ. ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸುವರು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುವ ಶಿವಾಜಿ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.

ಸಂಜೆ 4.00 ಗಂಟೆಗೆ ಹಳಿಯಾಳದ ಕೆಎಲ್ಎಸ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಆಗಮಿಸುವ ಮುಖ್ಯಮಂತ್ರಿ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ನಲ್ಲಿ ಸಸಿ ನೆಟ್ಟು ನಂತರ ಶಿವಾಜಿ ಕ್ರೀಡಾಂಗಣಕ್ಕೆ ಬರುವರು. ತಾಲ್ಲೂಕಿನ ವಿವಿಧೆಡೆಗಳಲ್ಲಿ ₹ 517 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 91 ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ.

ಈಗಾಗಲೇ ಶಿವಾಜಿ ಮೈದಾನದಲ್ಲಿ 15ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಸುಮಾರು 35ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್‌ ಪ್ರಮುಖರು ಹೇಳುತ್ತಾರೆ.

ADVERTISEMENT

ಶಿವಾಜಿ ಕ್ರೀಡಾಂಗಣದಲ್ಲಿ ವಿಶೇಷವಾಗಿ ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆ, ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪಟ್ಟಣದಲ್ಲಿ 24X7 ಶಾಶ್ವತ ಕುಡಿಯುವ ನೀರಿನ ಉದ್ದೇಶಿತ ಯೋಜನೆಯ ಮಾದರಿಯನ್ನು ಸಾರ್ವಜನಿಕ ವೀಕ್ಷಣೆಗೆ ಸಿದ್ದ ಪಡಿಸಲಾಗಿದೆ.

ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ. ವಾಹನ ನಿಲುಗಡೆ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ.

ಪುರಸಭೆಯ ವಿಶೇಷ ಅನುದಾನದಲ್ಲಿ ಪುರಭವನ ವಾಣಿಜ್ಯ ಸಂಕೀರ್ಣ, ವಸತಿ ಗೃಹ, ವಿವಿಧ ವಾರ್ಡ್‌ಗಳ ರಸ್ತೆ, ಚರಂಡಿ, ಎಲ್.ಇಡಿ ಬೀದಿ ದೀಪ ಅಳವಡಿಸುವ ಕಾಮಗಾರಿ, ತಾಲ್ಲೂಕು ಕ್ರೀಡಾಂಗಣ, ಒಳಾಂಗಣ ಸಭಾಭವನ ನಿರ್ಮಾಣದ ಶಂಕುಸ್ಥಾಪನೆ, ಆರೋಗ್ಯ ಇಲಾಖೆಯ 100 ಹಾಸಿಗೆ ಮೇಲ್ದರ್ಜೇಗೇರಿಸಿದ ನೂತನ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಲೋಕೋಪಯೋಗಿ ಇಲಾಖೆಯಿಂದ ಗ್ರಾಮೀಣ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳ ನಿರ್ಮಾಣದ ಶಿಲಾನ್ಯಾಸ, ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಕಾರಾಗೃಹ ಇಲಾಖೆಯಿಂದ ಉಪಕಾರಾಗೃಹ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣ, ಶಿವಾಜಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣ, ಸಿದ್ದಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಶಿಲಾನ್ಯಾಸ ಮಾಡಲಿದ್ದಾರೆ.
ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವ, ನೀರಾವರಿ ಸಚಿವ ಎಂ.ಬಿ.ಪಾಟೀಲ ಭಾಗವಹಿಸುವರು.

ಮುಖ್ಯಮಂತ್ರಿ ಕಾರ್ಯಕ್ರಮದ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.