ADVERTISEMENT

ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಆಲಮಟ್ಟಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 10:21 IST
Last Updated 10 ನವೆಂಬರ್ 2017, 10:21 IST

ಆಲಮಟ್ಟಿ (ನಿಡಗುಂದಿ): ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಮಧ್ಯಬಾಗದಲ್ಲಿ ಮತ್ತು ಜಲಾಶಯ, ಉದ್ಯಾನಗಳನ್ನು ಹೊಂದಿ ಪ್ರವಾಸಿ ತಾಣವಾಗಿರುವ ಆಲಮಟ್ಟಿಯನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗುವಂತೆ ಅಭಿವೃದ್ಧಿಗೊಳಿಸಬೇಕು ಎಂದು ನಾಗರಿಕರು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ, ‘ಆಲಮಟ್ಟಿಯು ಲಾಲ್‌ಬಹಾದ್ದೂರ್ ಶಾಸ್ತ್ರಿ ಜಲಾಶಯ ಹೊಂದಿ ನೂರಾರು ಕಿ.ಮೀ. ದೂರದವರೆಗೆ ಹಿನ್ನೀರು ಪ್ರದೇಶ ವ್ಯಾಪಿಸಿದೆ ಮತ್ತು ಅದರಲ್ಲಿ ಹಲವು ನಡುಗಡ್ಡೆ ಪ್ರದೇಶವಿದೆ ಇದರಿಂದ ಬೋಟಿಂಗ್, ಜಂಗಲ್ ರೆಸಾರ್ಟ್‌, ಪಕ್ಷಿಧಾಮ, ಮೊಸಳೆ ಪಾರ್ಕ್‌ಗಳನ್ನು ನಿರ್ಮಿಸುವುದರಿಂದ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಬರುತ್ತಾರೆ. ಇದರಿಂದ ಈ ಭಾಗವು ಅಭಿವೃದ್ಧಿಯಾಗುವುದರೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದು’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಮಲ್ಲು ರಾಠೋಡ, ಪ್ರವಾಸಿಗರಿಗೆ ಅವಶ್ಯವಾಗಿ ಬೇಕಾಗಿರುವ ನೈಸರ್ಗಿಕ ಕೊಡುಗೆ ಈ ಭಾಗದಲ್ಲಿದೆ ಇಲ್ಲಿಯ ಕೃಷ್ಣಾಭಾಗ್ಯಜಲನಿಗಮದ ವ್ಯವಸ್ಥಾಪಕರ ಕಚೇರಿ ಹತ್ತಿರದ ಗುಡ್ಡದಿಂದ ಶಾಸ್ತ್ರಿ ಜಲಾಶಯದ ಮುಂಭಾಗವಾಗಿ ಇತ್ತೀಚೆಗೆ ನಿರ್ಮಿಸಿರುವ ಕೆಪಿಸಿಎಲ್ ಪ್ರವಾಸಿ ಮಂದಿರದ ಗುಡ್ಡಕ್ಕೆ ವೈರ್ ಕಾರ್, ಪುಟಾಣಿ ರೈಲು, ವಾಟರ್ ಸ್ಪೋರ್ಟ್ಸ್‌ ಸೇರಿದಂತೆ ಹಲವು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಕೃಷ್ಣಾಭಾಗ್ಯಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ ಸಂಚಾಲಕ ಜಿ.ಸಿ. ಮುತ್ತಲದಿನ್ನಿ, ಎಸ್.ಎಂ. ಜಲ್ಲಿ, ಟಿ.ಎನ್. ಮಠ, ಕಾಶಿಮಸಾಬ ನಿಡಗುಂದಿ, ಶಿವು ಗದಿಗೆಪ್ಪಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.