ADVERTISEMENT

ಅಧಿಕಾರ ಗದ್ದುಗೆಗೆ ಕಸರತ್ತು

ಜಿ.ಪಂ.ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಮೇ 7ರಂದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 8:38 IST
Last Updated 30 ಏಪ್ರಿಲ್ 2016, 8:38 IST

ವಿಜಯಪುರ: ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಮೇ 7ರಂದು ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ–ಕಾಂಗ್ರೆಸ್‌ ತಂತ್ರ ಪ್ರತಿತಂತ್ರ ರೂಪಿಸುವಲ್ಲಿ ನಿರತವಾಗಿವೆ.

ಜಿಲ್ಲಾ ಪಂಚಾಯ್ತಿಯ ಅಧಿಕಾರ ‘ಕೈ’ ವಶಕ್ಕೆ ಕಾಂಗ್ರೆಸ್‌ಗೆ ನಾಲ್ವರು ಸದಸ್ಯರ ಬಲ ಅಗತ್ಯವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಗುರುವಾರ ನಗರಕ್ಕೆ ಬಂದಿದ್ದಾರೆ. ಮೇ 3ರ ತನಕ ಇಲ್ಲಿಯೇ ವಾಸ್ತವ್ಯ ಹೂಡಲಿದ್ದು, ಈ ಸಂದರ್ಭ ಪಂಚಾಯ್ತಿ ‘ಕೈ’ ವಶ ಮಾಡಿಕೊಳ್ಳುವ ಸಂಬಂಧ ತಂತ್ರಗಾರಿಕೆ ರೂಪಿಸಲಿದ್ದಾರೆ.

ಶುಕ್ರವಾರ ರಾತ್ರಿ ತಮ್ಮ ತಂತ್ರಗಾರಿಕೆಯ ದಾಳಗಳನ್ನು ಉರುಳಿಸುವ ಮೊದಲು ಪರಮಾಪ್ತರ ಜತೆ ಸಮಾಲೋಚನೆ ನಡೆಸಿದ್ದು, ನಂತರವೇ ಪ್ರಸಕ್ತ ವಿದ್ಯಮಾನಗಳನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುವ ಸಕಲ ವಿದ್ಯೆಗಳನ್ನು ಬಳಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರು ಇದುವರೆಗೂ ಯಾವೊಬ್ಬ ಸದಸ್ಯರ ಜತೆ ಚರ್ಚಿಸಿಲ್ಲ. ಸಭೆ ನಡೆಸಿಲ್ಲ. ಸಂಬಂಧಿಸಿದ ಕ್ಷೇತ್ರದ ಶಾಸಕರೇ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್‌ ಪಕ್ಷದ ನೂತನ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸವದಿ–ಚರಂತಿಮಠ ಸಭೆ: ಜಿಲ್ಲಾ ಬಿಜೆಪಿ ಪ್ರಭಾರಿಗಳಾಗಿ ನಿಯೋಜಿತಗೊಂಡಿರುವ ಲಕ್ಷ್ಮಣ ಸವದಿ, ವೀರಣ್ಣ ಚರಂತಿಮಠ ಶನಿವಾರ  ನಗರಕ್ಕೆ ಬರಲಿದ್ದು, ಸಂಜೆ 5 ಗಂಟೆಗೆ ರಹಸ್ಯ ಸ್ಥಳವೊಂದರಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಮುಖಂಡರ ಜತೆ ಚರ್ಚಿಸಲಿದ್ದು, ಬಳಿಕ 20 ಜಿಲ್ಲಾ ಪಂಚಾಯ್ತಿ ಸದಸ್ಯರ ಜತೆ ಮುಕ್ತ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಘೋಷಣೆ ನಡೆಯಲಿದೆ. ಅಭ್ಯರ್ಥಿ ಆಯ್ಕೆ ಬಳಿಕ ಮುಂದಿನ ಕಾರ್ಯತಂತ್ರದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಜಿಲ್ಲಾ ಬಿಜೆಪಿಯ, ಸಂಘ ಪರಿವಾರ ಮೂಲದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವರಿಷ್ಠರೇ ಅಂತಿಮ: ಕಾಂಗ್ರೆಸ್‌–ಬಿಜೆಪಿ ಎರಡೂ ಪಕ್ಷದ ಮುಖಂಡರು ಬೆಂಬಲ ಕೋರಿದ್ದಾರೆ. ಯಾರಿಗೂ ನಾವು ಬೆಂಬಲದ ಭರವಸೆ ನೀಡಿಲ್ಲ. ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ,ಕುಮಾರಸ್ವಾಮಿಗೆ ಮಾತು ನೀಡಿದ್ದೇವೆ. ಅವರ ನಿರ್ಧಾರವೇ ಅಂತಿಮ ಎಂದು ಮುದ್ದೇಬಿಹಾಳ ತಾಲ್ಲೂಕು ಬಂಡೆಪ್ಪನ ಸಾಲವಾಡಗಿ ಜಿಲ್ಲಾ ಪಂಚಾಯ್ತಿ ಮತಕ್ಷೇತ್ರದ ಜೆಡಿಎಸ್‌ ಸದಸ್ಯ ಬಸನಗೌಡ ವಣಿಕ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷಕ್ಕೆ ಮೊದಲ ನಿಷ್ಠೆ ನಮ್ಮದು. ಹೈಕಮಾಂಡ್‌ ತೆಗೆದು ಕೊಳ್ಳುವ ನಿರ್ಧಾರ ಪಾಲಿಸುತ್ತೇವೆ. ಯಾವುದೇ ಒತ್ತಡಗಳಿಗೆ ಮಣಿಯಲ್ಲ. ನೀವು ನೀಡುವ ಸೂಚನೆ ಪಾಲಿಸುತ್ತೇವೆ.

ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಸೂಚಿಸುತ್ತೀರಾ ಆ ಪಕ್ಷದ ಜತೆ ದೋಸ್ತಿ ಬೆಳೆಸುತ್ತೇವೆ ಎಂದು ಈಗಾಗಲೇ ಹಲವು ಬಾರಿ ರಾಜ್ಯ ವರಿಷ್ಠರಿಗೆ ತಿಳಿಸಿದ್ದೇವೆ.

ನಾವು ಯಾರ ಜತೆ ದೋಸ್ತಿ ಬೆಸೆದು ಕೊಂಡರೂ ಅಧ್ಯಕ್ಷ ಸ್ಥಾನ ಸಿಗಲ್ಲ’ ಎಂದ ಅವರು, ‘ಉಪಾಧ್ಯಕ್ಷ ಸ್ಥಾನ ಕಟ್ಟಿಟ್ಟ ಬುತ್ತಿ. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯ ಹಿತದೃಷ್ಟಿಯನ್ನುಟ್ಟುಕೊಂಡು ದೋಸ್ತಿ ಬೆಳೆಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.