ADVERTISEMENT

ಇತಿಹಾಸದ ಮರು ನಿರ್ಮಾಣ ಸಾಧ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:58 IST
Last Updated 21 ಮೇ 2017, 6:58 IST

ವಿಜಯಪುರ: ನಗರದಲ್ಲಿನ ಐತಿಹಾಸಿಕ ಬಾವಡಿಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಇತಿಹಾಸವನ್ನು ಮರು ನಿರ್ಮಿಸಿದಂತೆ ಎಂದು ಖ್ಯಾತ ಜಲತಜ್ಞ ಡಾ.ರಾಜೇಂದ್ರ ಸಿಂಗ್ ಹೇಳಿದರು.

ಜಲಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯಲ್ಲಿ ಕೆರೆ ನೀರು ತುಂಬುವ ಯೋಜನೆ ಅಡಿ ಕೈಗೊಂಡಿರುವ ಮಮದಾಪುರ, ಬೇಗಂ ತಲಾಬ, ಭೂತನಾಳ ಕೆರೆಗಳನ್ನು ಹಾಗೂ ನಗರದ ಇಬ್ರಾಹಿಂಪುರ ಬಾವಡಿ, ಗೋಲಗುಮ್ಮಜ ಬಾವಡಿ, ನರಸಿಂಹ ದೇವಸ್ಥಾನದ ಕಂದಕದ ಹೂಳು ತೆಗೆಯುವ ಕಾಮಗಾರಿ ವೀಕ್ಷಿಸಿದ ನಂತರ ಅವರು ಮಾತನಾಡಿದರು.

‘ಬರ ಮುಕ್ತ ಭಾರತ ಅಭಿಯಾನ ಅಂಗವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಗೋವಾದಿಂದ ಗೌಹಾತಿವರೆಗೆ ಜಲ ಸಾಕ್ಷರತೆ ಜಾಗೃತಿ ಮೂಡಿಸಲು ದೇಶದಾದ್ಯಂತ ಸಂಚರಿಸುತ್ತಿರುವ ನನಗೆ  ಜಲಸಂಪನ್ಮೂಲ ಇಲಾಖೆ ಸಚಿವ ಎಂ.ಬಿ.ಪಾಟೀಲ ಮಾಡಿರುವ ಕಾರ್ಯ ಬಹಳ ಖುಷಿ ತಂದಿದೆ. ವಿಜಯಪುರ ನಗರದಲ್ಲಿ ಮಾಡಿರುವ ಕೆಲಸ ಇಲ್ಲಿನವರಿಗೆ ಅದರ ಮಹತ್ವ ಗೊತ್ತಿರಲಿಕ್ಕಿಲ್ಲ. ಆದರೆ, ಇತಿಹಾಸ ಮತ್ತು ಸಂಸ್ಕೃತಿ ಪ್ರೀತಿಸುವ ಎಲ್ಲರೂ ಈ ಕಾರ್ಯವನ್ನು ಮೆಚ್ಚಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ತಾಜಬಾವಡಿಗೆ ಭೇಟಿ ನೀಡಿದ್ದೆ, ಅಲ್ಲಿನ ಕೊಳಕಿನಿಂದ ಒಳಗೆ ಹೋಗಲು ಆಗಲಿಲ್ಲ. ಆದರೆ, ಇಂದು ಆ ಮಹತ್ವದ ಸ್ಥಾನಗಳು ಸ್ವಚ್ಚಗೊಂಡಿವೆ. ಸ್ಥಳೀಯವಾಗಿ ಸಮಿತಿಯನ್ನು ರಚಿಸಿಕೊಂಡು ಈ ಬಾವಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕೃಷ್ಣಾ ಭಾಗ್ಯ ಜಲ ನಿಗಮ ತಾಂತ್ರಿಕ ನಿರ್ದೇಶಕ ಅರವಿಂದ ಗಲಗಲಿ, ಇತಿಹಾಸ ತಜ್ಞ ಡಾ.ಎಚ್.ಜಿ.ದಡ್ಡಿ, ಪತ್ರಕರ್ತ ರಾಜು ವಿಜಾಪುರ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ, ಡಾ.ರಾಜೇಂದ್ರ ಪೋದ್ದಾರ, ಅಪ್ಪಾಸಾಹೇಬ ಯರನಾಳ, ಪೀಟರ್ ಅಲೆಕ್ಸಾಂಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.