ADVERTISEMENT

ಎಚ್‌.ಡಿ.ಕೆ ಪ್ರವಾಸ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:42 IST
Last Updated 25 ಮೇ 2017, 8:42 IST

ವಿಜಯಪುರ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದೇ 25ರಿಂದ ಎರಡು ದಿನ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ತಿಳಿಸಿದರು.

ಗುರುವಾರ ಮಧ್ಯಾಹ್ನ 3ಕ್ಕೆ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್‌ಡಿಕೆ ಭಾಗವಹಿಸಲಿದ್ದಾರೆ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎರಡು ದಿನ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿರುವ ಎಚ್‌ಡಿಕೆ ವಿವಿಧ ಭಾಗಗಳಲ್ಲಿ ನಡೆಯಲಿರುವಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ, ಈ ಸಂದರ್ಭ ಕಾರ್ಯಕರ್ತರೊಡನೆ ಸಮಾಲೋಚನೆ ಸಹ ನಡೆಸಲಿದ್ದಾರೆ ಎಂದರು.

ಗುರುವಾರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಬೃಹತ್ ಸಮಾವೇಶಲ್ಲಿ ಪಾಲ್ಗೊಂಡು ನಂತರ ನಾಗಠಾಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹೊನ್ನುಟಗಿ, ಶಿವಣಗಿ ಗ್ರಾಮದಲ್ಲಿ ನಡೆಯಲಿರುವ ಸಮಾವೇಶಗಳಲ್ಲಿಯೂ ಭಾಗವಹಿಸಲಿದ್ದಾರೆ.

ಬೈಕ್ ರ್‌್ಯಾಲಿಯ ಮೂಲಕ ಸಮಾವೇಶ ನಡೆಯುವ ಗ್ರಾಮಗಳಿಗೆ ಕರೆದುಕೊಂಡು ಹೋಗಲಾಗುವುದು. ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೈಕ್ ರ್‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

26ರಂದು ಸಹ ಇಂಡಿ ತಾಲ್ಲೂಕಿನ ತಾಂಬಾ, ಸಿಂದಗಿ ತಾಲ್ಲೂಕಿನ ಗೋಲಗೇರಿ, ಚಾಂದಕವಠೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಭೆ, ಸಮಾವೇಶ ಮುಗಿಸಿ ಪುನಃ ವಿಜಯಪುರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ದೇವಾನಂದ ಚವ್ಹಾಣ ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಜಿಲ್ಲೆಯ ಐದರಿಂದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸುವುದಂತು ನಿಶ್ಚಿತ. ಈಗಾಗಲೇ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಚುರುಕು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಜಿಲ್ಲಾ ಪ್ರವಾಸ ಕೈಗೊಂಡಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಚಿಗುರಿದೆ ಎಂದು ವಿವರಿಸಿದರು.

ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಸೈಯ್ಯದ್ ಮೊಹಿನ್ ಅಲ್ತಾಫ್, ಎಂ.ಆರ್.ಪಾಟೀಲ, ಚಂದ್ರಕಾಂತ ಹಿರೇಮಠ, ಎಸ್.ವಿ.ಪಾಟೀಲ ಸಿಂದಗಿ, ದಿಲಾವರ ಖಾಜಿ, ಎಸ್.ಎಸ್.ಖಾದ್ರಿ ಇನಾಮದಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.