ADVERTISEMENT

ಎಸ್‌.ಟಿ ಸ್ಥಾನಮಾನ: ಶಿಫಾರಸಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:56 IST
Last Updated 21 ಮೇ 2017, 6:56 IST

ವಿಜಯಪುರ: ಕುರುಬ (ಹಾಲುಮತ) ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹಾಲುಮತ ಸಮಾಜದ ಮುಖಂಡ ಮಲ್ಲಪ್ಪ ಬಿದರಿ  ಒತ್ತಾಯಿಸಿದರು.ನಗರದಲ್ಲಿ ಈಚೆಗೆ ಕುರುಬ ಎಸ್.ಟಿ. ಸ್ಥಾನಮಾನ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ   ಅವರು ಮಾತನಾಡಿದರು.

‘ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಹಾಲುಮತ (ಕುರುಬ) ಸಮಾಜದ ಸಮನಾರ್ಥಕ ಪದಗಳಾದ ಕಾಡು ಕುರುಬ, ಜೇನು ಕುರುಬ, ಕುರುಬ ಸಮಾಜಕ್ಕೆ ಎಸ್.ಟಿ. ವರ್ಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಈ ವ್ಯವಸ್ಥೆ ಜಾರಿಗೊಳ್ಳಬೇಕಿದೆ’ ಎಂದು ಹೇಳಿದರು.

ಕುರುಬ ಸಮಾಜದ ಸ್ಥಿತಿಗತಿಗಳ ಕುರಿತು ಹಲ ಆಯೋಗಗಳು ವರದಿ ಸಲ್ಲಿಸಿವೆ. ಹಿಂದುಳಿದ ಎಲ್ಲ ಸಮಾಜಗಳಿಗಿಂತ ಕುರುಬ ಸಮಾಜವು ಅತ್ಯಂತ ಹಿಂದುಳಿದಿದೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ.  ಕೂಡಲೇ ವಿಶೇಷವಾಗಿ ಸರ್ವ ಪಕ್ಷಗಳ ಪ್ರತಿನಿಧಿಗಳ ನೇತೃತ್ವದಲ್ಲಿ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚಿಸಿ ಎಸ್.ಟಿ.ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಕುರುಬರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್.ಟಿ) ಪಟ್ಟಿಗೆ ಸೇರಿಸಬೇಕೆಂಬ ಕೂಗು ದಶಕಗಳಿಂದಲೂ ಇದೆ. ಕುರುಬ ಸಮುದಾಯದ ಗೊಂಡ, ರಾಜಗೊಂಡ, ಕುರಂಬ, ಜೇನ, ಕಾಡು ಕುರುಬ, ಕುರುಮ ಸಮುದಾಯವು ಕುರುಬರ ಸಮಾಜದ ಸಮನಾರ್ಥಕ ಪದಗಳಾಗಿವೆ.

80ರ ದಶಕದಲ್ಲಿ ಕುರುಬರನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ ಇಲ್ಲಿಯವರೆಗೂ ಎಸ್.ಟಿ. ಪಟ್ಟಿಗೆ ಸಮಾಜ ಸೇರ್ಪಡೆಯಾಗಿಲ್ಲ, ಇನ್ನಾದರೂ ಸರ್ಕಾರಗಳು ಕುರುಬ ಸಮಾಜದ ಹಿತರಕ್ಷಣೆಗಾಗಿ ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡ ರಾಜಕುಮಾರ ಸಗಾಯಿ ಮಾತನಾಡಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ದತ್ತಾತ್ರೇಯ ಯಡಗಿ, ನಗರ ಘಟಕದ ಅಧ್ಯಕ್ಷ ಗೋಪಾಲ ಕಣಿಮನಿ, ಕರೆಪ್ಪ ಪೂಜಾರಿ, ಮಾಧ್ಯಮ ಕಾರ್ಯದರ್ಶಿ ಪ್ರಶಾಂತ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.