ADVERTISEMENT

ಕಲಿಸುತ್ತಲೇ ಎ.ಸಿ ಹುದ್ದೆಗೆ ಏರಿದ ಸಾಧಕ

ಮಹಾಬಲೇಶ್ವರ ಶಿ.ಗಡೇದ
Published 5 ಸೆಪ್ಟೆಂಬರ್ 2017, 5:15 IST
Last Updated 5 ಸೆಪ್ಟೆಂಬರ್ 2017, 5:15 IST
ಕೆ.ಎ.ಎಸ್ ಮೇನ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂದರ್ಭದಲ್ಲಿ ಶಂಕರ ಬೆಳ್ಳುಬ್ಬಿ  ಹಾಗೂ ಅವರ ತಂದೆ–ತಾಯಿಯನ್ನು ಮುದ್ದೇಬಿಹಾಳದಲ್ಲಿ ಸನ್ಮಾನಿಸಲಾಯಿತು
ಕೆ.ಎ.ಎಸ್ ಮೇನ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂದರ್ಭದಲ್ಲಿ ಶಂಕರ ಬೆಳ್ಳುಬ್ಬಿ ಹಾಗೂ ಅವರ ತಂದೆ–ತಾಯಿಯನ್ನು ಮುದ್ದೇಬಿಹಾಳದಲ್ಲಿ ಸನ್ಮಾನಿಸಲಾಯಿತು   

ಮುದ್ದೇಬಿಹಾಳ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಉಪಜೀವನಕ್ಕೆ ಅಪ್ಪ, ಅವ್ವ ಹಳ್ಳಿಯಲ್ಲಿ ನಡೆಸುತ್ತಿದ್ದ ಸಣ್ಣ ಚಹಾದ ಅಂಗಡಿಯೇ ಆಧಾರ... ನಂತರ ಚಹಾದಂಗಡಿ ಸಹ ನಡೆಯದಾದ ಅಪ್ಪ, ಅವ್ವನೊಂದಿಗೆ ಬಾಲ ಕಾರ್ಮಿಕನಾಗಿ ದುಡಿತ.

ಯಾವುದೇ ಮೂಲ ಸೌಲಭ್ಯಗಳನ್ನು ಕಾಣದ ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳದ ಗೆಣ್ಣೂರಿನ ಹಳ್ಳಿ ಹೈದನೊಬ್ಬ ಆರಂಭದಲ್ಲಿ ಶಿಕ್ಷಕನಾಗಿ ನಂತರ ನೂರಾರು ಮಕ್ಕಳಿಗೆ ಕಲಿಸುತ್ತಲೇ ತಾನೂ ಕಲಿಯುತ್ತಲೇ ಈಚೆಗೆ ನಡೆದ 2014ನೇ ಸಾಲಿನ ಕೆ.ಎ.ಎಸ್ ಪರೀಕ್ಷೆ ಯಲ್ಲಿ ರಾಜ್ಯಕ್ಕೆ 16 ನೇ ರ್‍್ಯಾಂಕ್ ಪಡೆದು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ನೇಮಕ ಗೊಂಡ ಕಥೆ ಇದು.

ಇದು ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ಗಿರಿಮಲ್ಲಪ್ಪ ಬೆಳ್ಳುಬ್ಬಿ ಅವರ ಕಥೆ. 1986 ರಲ್ಲಿ ಜನಿಸಿದ ಇವರಿಗೆ 2009 ರವರೆಗೆ ವಾಸಿಸಲು ಸ್ವಂತ ಮನೆ ಸಹ ಇರಲಿಲ್ಲ.

ADVERTISEMENT

ಎಸ್.ಎಸ್.ಎಲ್.ಸಿ.ಯಲ್ಲಿ ಕೇಂದ್ರಕ್ಕೆ ಎರಡನೆಯ ರ್‍್ಯಾಂಕ್ ಪಡೆದು, ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ, ಡಿ.ಇಡಿಯಲ್ಲಿ ಮತ್ತೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾದರು. ಪಿಯುಸಿ ಕಲಿಯುವಾಗಲೇ  ದಿನಪತ್ರಿಕೆಗಳನ್ನು ಮನೆ ಮನೆಗೆ ಹಾಕಿ ಬೆಳೆದ ಶಂಕರಗೆ ಬಡತನ ಕಲಿಸಿದ ಪಾಠಗಳು ಅಷ್ಟಿಷ್ಟಲ್ಲ.

ಗುಡಿಸಲಿನಲ್ಲಿ ದೀಪ ಹಚ್ಚಿಕೊಂಡು ಓದುತ್ತಿದ್ದರೆ, ಜೋರಾದ ಗಾಳಿಗೆ ದೀಪ ಆರುವು ದಿರಲಿ, ಗುಡಿಸಲಿನ ಮೇಲೆ ಹಾಕಿದ್ದ ತಗಡು ಸಹ ಹಾರಿ ಹೋಗಿ ಕಣ್ಣೀರು ಹಾಕಿದ ಪ್ರಸಂಗಗಳಿವೆ. ಇಂಥ ಬಡತನದಲ್ಲಿಯೂ ಕೆ.ಎ.ಎಸ್  ಪ್ರಿಲಿಮ್ಸ್‌, ಮೇನ್ಸ್‌ ತೇರ್ಗಡೆ ಯಾದ ಶಂಕರ ಅವರಿಗೆ ಸಂದರ್ಶನಕ್ಕೆ ಹೋಗಲೂ ಸಹ ಹಣ ಇರದ ಸ್ಥಿತಿ.

ದಾಖಲೆಯ ಎಸ್.ಆರ್. ವರ್ಲ್ಡ್‌: ಆಗಿನ್ನೂ ವಾಟ್ಸಾ ಆ್ಯಪ್ ಇರದ ಕಾಲದಲ್ಲಿ (2007 ರಲ್ಲಿ) ಎಸ್.ಆರ್.ವರ್ಲ್ಡ್ ಎಂಬ ಹೆಸರಿನಲ್ಲಿ ಪ್ರತಿನಿತ್ಯ ಸುಮಾರು 30 ರಿಂದ 50 ಸಾವಿರ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಎಸ್.ಎಂ.ಎಸ್ ರೂಪದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ನಿತ್ಯ ಕಳಿಸಿ ಅವರ ಜ್ಞಾನ ಹಿಂಗಿಸಿದ ಕೀರ್ತಿ  ಶಂಕರ ಅವರದು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಹೇಳುವ ಕಿವಿಮಾತೊಂದೇ ಏನೆಂದರೆ ‘ನಿಮ್ಮಲ್ಲಿ ಒಂದು ದೂರದೃಷ್ಟಿ, ಯೋಜನೆ ಇಲ್ಲದೇ ಹೋದರೆ ನೀವೇನೂ ಸಾಧಿಸಲಾರಿರಿ. ಈಗಿನಿಂದಲೇ ಕ್ರಮಬದ್ಧ ಅಭ್ಯಾಸ ಮಾಡಿ’ ಎನ್ನುವ ಶಂಕರ ಬೆಳ್ಳುಬ್ಬಿ ಈಗ ಸರ್ಕಾರ ನೀಡಲಿರುವ ಆದೇಶಕ್ಕೆ ಕಾಯುತ್ತ ಶಿಕ್ಷಕ ಸೇವೆಯಲ್ಲಿ (ಸದ್ಯಕ್ಕೆ) ಮುಂದುವರಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.