ADVERTISEMENT

ಕಾಮಗಾರಿ ಕಳಪೆ: ತನಿಖೆಗೆ ಆಗ್ರಹ

ಅಧಿಕಾರಿಗಳ ಗೈರು; ಕೆಡಿಪಿ ಸಭೆಯಲ್ಲಿ ಶಾಸಕ ಭೂಸನೂರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:26 IST
Last Updated 31 ಜನವರಿ 2017, 5:26 IST
ಸಮಾಜ ಕಲ್ಯಾಣ ಇಲಾಖೆ ಕಚೇರಿ ಕಟ್ಟಡದ ಕಳಪೆ ಗುಣಮಟ್ಟದ ಕಾಮಗಾರಿಗೆ ಸಂಬಂಧಿಸಿದ ಚಿತ್ರಗಳನ್ನು ಸಿಂದಗಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯ ಚಂದ್ರಕಾಂತ ಸಿಂಗೆ ಪ್ರದರ್ಶಿಸಿದರು
ಸಮಾಜ ಕಲ್ಯಾಣ ಇಲಾಖೆ ಕಚೇರಿ ಕಟ್ಟಡದ ಕಳಪೆ ಗುಣಮಟ್ಟದ ಕಾಮಗಾರಿಗೆ ಸಂಬಂಧಿಸಿದ ಚಿತ್ರಗಳನ್ನು ಸಿಂದಗಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯ ಚಂದ್ರಕಾಂತ ಸಿಂಗೆ ಪ್ರದರ್ಶಿಸಿದರು   

ಸಿಂದಗಿ: ಪಟ್ಟಣದಲ್ಲಿ ₹85 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮಾಜಕಲ್ಯಾಣ ಇಲಾಖೆ ಕಚೇರಿ ಕಟ್ಟಡ ಸಂಪೂರ್ಣ ಕಳಪೆಯಾಗಿದೆ. ಅದರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೆಡಿಪಿ ಸದಸ್ಯ ಚಂದ್ರಕಾಂತ ಸಿಂಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಪೋಟೊ ಪ್ರದರ್ಶಿಸುತ್ತ ಕಟ್ಟಡಕ್ಕೆ ಭದ್ರ ಬುನಾದಿ ಬೇಕು. ಆದರೆ ಈ ಕಟ್ಟಡಕ್ಕೆ ಬುನಾದಿ ಅಗಿಯದೇ ನೆಲದ ಮೇಲೆ ಕಬ್ಬಿಣ ಕಟ್ಟಿಕೊಂಡು ಪಿಲ್ಲರ್ ಕಟ್ಟುತ್ತಿದ್ದಾರೆ ಎಂದು ಮಾತನಾಡಿದರು.

ನಿರ್ಮಿತಿ ಕೇಂದ್ರ ಈ ಕಾಮಗಾರಿ ಮಾಡುತ್ತಿದ್ದು, ತಕ್ಷಣವೇ ಅವರಿಂದ ಬೇರೆ ಏಜೆನ್ಸಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಆಗ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋದ್ದಾರ, ಕಾಮಗಾರಿಯನ್ನು ಬೆಂಗಳೂರು ಕಚೇರಿಯಿಂದ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಅದರಂತೆ ಇದೇ ಇಲಾಖೆ ಅಡಿಯಲ್ಲಿ ತಾಲ್ಲೂಕಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನಗಳು ತುಂಬಾ ಕಳಪೆಮಟ್ಟದಲ್ಲಿ ನಿರ್ಮಾಣವಾಗುತ್ತಿವೆ. ₹7 ಲಕ್ಷ ವೆಚ್ಚದಲ್ಲಿಯೇ ಭವನ ನಿರ್ಮಾಣಗೊಳ್ಳುತ್ತಿದ್ದರೂ ಒಂದು ಭವನಕ್ಕೆ ₹14 ಲಕ್ಷ ವೆಚ್ಚದ ಅಂದಾಜು ಪತ್ರಿಕೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಸಿಂಗೆ ಆರೋಪಿಸಿದರು. ಇದಕ್ಕೆ ಭೂ ಸೇನಾ ನಿಗಮ ಎಇಇ ಪ್ರತಿಕ್ರಿಯಿಸಿ, ಹಾಗಿದ್ದರೆ ಬೇರೆಯವರಿಗೆ ಕಾಮಗಾರಿ ಕೊಡಿ. ಸುಮ್ಮನೆ ಕಳಪೆ ಎಂದು ಅನ್ನಬೇಡಿ ಎಂದರು.

ಓತಿಹಾಳ ಮತ್ತು ಚಾಂದಕವಠೆ ಗ್ರಾಮಗಳಿಗೆ ಹಿಂದುಳಿವ ವರ್ಗಗಳ ಇಲಾಖೆ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದಿದ್ದರೂ ಇಲಾಖಾ ಅಧಿಕಾರಿ ಈ ಬಗ್ಗೆ ಒಂದು ವರದಿ ಕಳಿಸಲು ಆಗುತ್ತಿಲ್ಲ ಎಂದ್ರೆ ಹೇಗೆ? ಎಂದು ಶಾಸಕ ರಮೇಶ ಭೂಸನೂರ ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪ್ರಾದೇಶಿಕ ಅರಣ್ಯ ಇಲಾಖೆ ವಿಶೇಷ ಘಟಕ ಯೋಜನೆಯಡಿ ಸಿಂದಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 80 ಫಲಾನುಭವಿಗಳ ಆಯ್ಕೆಯನ್ನು ಕೆಡಿಪಿ ಸಭೆಯಲ್ಲಿ ಒಪ್ಪಿಗೆ ಪಡೆಯದೇ ಹೇಗೆ? ಆಯ್ಕೆ ಮಾಡಿದ್ದೀರಿ ಎಂದು ವಲಯ ಅರಣ್ಯಾಧಿಕಾರಿಯನ್ನು ಪ್ರಶ್ನಿಸಲು ಶಾಸಕರು ನೀಡಿದ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಆಗ ಶಾಸಕರು ಮಧ್ಯೆ ಪ್ರವೇಶಿಸಿ ಕೆಡಿಪಿ ಸಭೆಯ ಅನುಮತಿ ಅವಶ್ಯಕತೆ ಇಲ್ಲ ಎಂದಾಗ ಸಂಬಂಧಿಸಿದ ಮಾರ್ಗಸೂಚಿ ಓದಿ ಎಂದು ಸಿಂಗೆ ಅಧಿಕಾರಿ ಮುಖಾಂತರ ಶಾಸಕರಿಗೆ ಮಾರ್ಗಸೂಚಿ ಪತ್ರ ತಲುಪಿಸಿದಾಗ ಮುಂದಿನ ವರ್ಷ ಸರಿಪಡಿಸೋಣ ಎಂದು ಮಾತು ಬದಲಿಸಿ ಈಗಿದ್ದ ಫಲಾನುಭವಿಗಳ ಪಟ್ಟಿ ಬದಲಿಸಿದರೆ ಅವರೇಕೆ ಸುಮ್ಮನಿರ್ತಾರೆ ಎಂದರು.

ತಹಶೀಲ್ದಾರ್ ಎಂ.ಎಸ್.ಅರಕೇರಿ ಮಾತನಾಡಿ, ಮ ಉಂಬರುವ ದಿನಗಳಲ್ಲಿ ಜಾನುವಾರುಗಳಿಗೆ 6.6 ಮೆಟ್ರಿಕ್ ಟನ್ ಮೇವು ಸಂಗ್ರಹ ಮಾಡಿ ಇಡಲಾಗಿದೆ. ಅಲ್ಲದೇ ಆಲಮೇಲದಲ್ಲಿ 25 ಎಕರೆ ಕಂದಾಯ ಇಲಾಖೆ ಜಾಗೆಯಲ್ಲಿ ಮೇವು ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ರಮೇಶ ಭೂಸನೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಸಿರಸಗಿ, ತಹಶೀಲ್ದಾರ್ ಎಂ.ಎಸ್. ಅರಕೇರಿ, ತಾಲ್ಲೂಕು ಪಂಚಾಯ್ತಿ ಇಓ ಡಾ.ಸುಭಾಸ ಟಕ್ಕಳಕಿ ಉಪಸ್ಥಿತರಿದ್ದರು.

***

ಏಳು ಇಲಾಖೆ ಅಧಿಕಾರಿಗಳು ಕೆಡಿಪಿ ಸಭೆಗೆ ಗೈರು ಉಳಿಯುವ ಮೂಲಕ ಸಭೆಗೆ ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ಮೇಲೆ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು
- ರಮೇಶ ಭೂಸನೂರ, ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.