ADVERTISEMENT

ಕಾಮನಕೇರಿಯಲ್ಲಿ ಒಂದಾದ ‘ಕೈ’ ಶಾಸಕರು

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:11 IST
Last Updated 20 ಮೇ 2017, 5:11 IST
ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿಯಲ್ಲಿ ಗುರುವಾರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸ್ವಾಗತಕ್ಕೆ ಒಟ್ಟಿಗೆ ಕಾದು ಕೂತಿದ್ದ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು		ಪ್ರಜಾವಾಣಿ ಚಿತ್ರ
ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿಯಲ್ಲಿ ಗುರುವಾರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸ್ವಾಗತಕ್ಕೆ ಒಟ್ಟಿಗೆ ಕಾದು ಕೂತಿದ್ದ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಪ್ರಜಾವಾಣಿ ಚಿತ್ರ   

ವಿಜಯಪುರ: ಚುನಾವಣಾ ವರ್ಷ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಜೆಡಿಎಸ್‌ಗೆ ಸೆಡ್ಡು ಹೊಡೆಯುವಂತೆ ‘ಕೈ’ ಪಾಳೆಯವೂ ಈಚೆಗೆ ಚುರುಕಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಿಂದಲೂ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಶೀತಲ ಸಮರ ಬಿರುಸಿನಿಂದ ನಡೆದಿತ್ತು. ಪ್ರತಿ ಹಂತದಲ್ಲೂ ವಿಶೇಷವಾಗಿ ‘ಪಾಟೀಲದ್ವಯರ’ ನಡುವೆ ನಡೆಯುತ್ತಿದ್ದ ತಿಕ್ಕಾಟ, ಬಳಿಕ ಪಾಟೀಲತ್ರಯರ ನಡುವೆ ಆರಂಭಗೊಂಡಿತು.

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ತಮ್ಮ ಅಸಮಾಧಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು.

ADVERTISEMENT

ಶಿವಾನಂದ ಪಾಟೀಲ ಹೆಸರು ಪ್ರಸ್ತಾಪಿಸದೆ ಟೀಕಿಸಿದರೆ, ನಡಹಳ್ಳಿ ಸಚಿವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದರು. ಮುದ್ದೇಬಿಹಾಳ ಶಾಸಕ, ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಸಹ ತಮಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಎಂ.ಬಿ.ಪಾಟೀಲ ವಿರುದ್ಧ ಅಸಮಾಧಾನವನ್ನು ತಮ್ಮ ಬೆಂಬಲಿಗರ ಮೂಲಕ ಹೊರ ಹಾಕಿಸಿದ್ದರು.

ಉಳಿದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕೆಲವೊಮ್ಮೆ ಸಚಿವರ ವಿರುದ್ಧದ ಶಾಸಕರ ಗುಂಪಿನಲ್ಲಿ ಗೋಚರಿಸಿದರೂ, ಪಕ್ಷದ ವಿಚಾರ ಬಂದಾಗ ಎಂ.ಬಿ.ಪಾಟೀಲ ಬೆನ್ನಿಗಿದ್ದ ಇತಿಹಾಸವಿದೆ.

ಇನ್ನೂ ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್ ಎಸ್‌.ಬಾಗವಾನ, ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ ಎಂ.ಬಿ.ಪಾಟೀಲ ಬೆಂಬಲಿಗರು. ಕೆಲವೊಮ್ಮೆ ತಮ್ಮದೇ ಅಸ್ಥಿತ್ವ ಪ್ರದರ್ಶನಕ್ಕೆ ಯತ್ನಿಸಿದರೂ ಯಶಸ್ವಿಯಾಗಿಲ್ಲ. ಸಂಸದೀಯ ಕಾರ್ಯದರ್ಶಿ ಸ್ಥಾನಮಾನ, ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯಲು ಸಫಲರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಹಲ ಸರ್ಕಾರಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೂ, ಏಳು ಶಾಸಕರು ಒಂದೆಡೆ ಸೇರಿದ್ದು ಅಪರೂಪ. ಮೂರ್ನಾಲ್ಕು ಮಂದಿ ಸಿಎಂ ಜತೆ ತೆರಳುತ್ತಿದ್ದರು.

ಆದರೆ ಗುರುವಾರ ಕಾಮನಕೇರಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಭೇಟಿಗೆ ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ ಹೊರತುಪಡಿಸಿ, ಉಳಿದ ಐವರು ಶಾಸಕರು ಒಂದೆಡೆ ಕುಳಿತು ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಐವರು ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿ ಸ್ವಾಗತಿಸಿದರು. ಈ ಹಿಂದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗೆಬ್ಬಿಸಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ, ಹಾಲಿ ಜೆಡಿಎಸ್‌ ಜತೆ ಗುರುತಿಸಿಕೊಂಡಿರುವ ಎ.ಎಸ್‌.ಪಾಟೀಲ ನಡಹಳ್ಳಿ ಹಾಜರಿಯೂ ಅಚ್ಚರಿ ಮೂಡಿಸಿತ್ತು.

ಶಿವಾನಂದ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ ಹೆಲಿಪ್ಯಾಡ್‌ ಬಳಿ ಹಾಕಲಾಗಿದ್ದ ಶಾಮಿಯಾನದಲ್ಲಿ ಅಕ್ಕಪಕ್ಕ ಕೈ ಹಿಡಿದು ಕುಳಿತು ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದು ಗಮನ ಸೆಳೆಯಿತು.

ಕ್ಷೇತ್ರದ ಶಾಸಕನಾಗಿ ಮುಖ್ಯಮಂತ್ರಿ ಸ್ವಾಗತಕ್ಕೆ ಬಂದಿರುವೆ, ವಿಶೇಷವೇನಿಲ್ಲ. ನನ್ನ ನಿಲುವಿಗೆ ನಾನು ಬದ್ಧ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವುದು ಶತಸಿದ್ಧ
ಎ.ಎಸ್‌.ಪಾಟೀಲ ನಡಹಳ್ಳಿ
ದೇವರ ಹಿಪ್ಪರಗಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.