ADVERTISEMENT

‘ಕೈ’ ಪಡೆ ಕಲಹ; ಸಚಿವರ ವಿರುದ್ಧ ಗರಂ?

ಬೆಂಗಳೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಆಕ್ರೋಶ!

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:47 IST
Last Updated 25 ಮೇ 2017, 8:47 IST

ವಿಜಯಪುರ: ಜಿಲ್ಲಾ ಕಾಂಗ್ರೆಸ್‌ನ ಶಾಸಕರ ನಡುವಿನ ‘ಶೀತಲ ಸಮರ’ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಪಕ್ಷ ಸಂಘಟನೆಗಾಗಿ ತಮ್ಮದೇ ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ಕಂದಾಯ ವಿಭಾಗ ವ್ಯಾಪ್ತಿಯ ಜಿಲ್ಲೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿದ್ದಾರೆ.

ಸೋಮವಾರ ಸಂಜೆ 4.15ರಿಂದ 5.15ರವರೆಗೆ ಬೆಂಗಳೂರಿನಲ್ಲಿ ನಡೆದ ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಸಭೆಯಲ್ಲಿ ಭಾಗಿಯಾಗಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಕಾಂಗ್ರೆಸ್‌ನ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜತೆ ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ, ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಗುರುತಿಸಿಕೊಂಡಿದ್ದರೆ, ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಜೆಡಿಎಸ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಮುದ್ದೇಬಿಹಾಳ ಶಾಸಕ, ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಒಂದಾಗಿ ಗುರುತಿಸಿಕೊಂಡಿದ್ದು, ಈ ಎರಡೂ ಬಣ ಗಳು ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಕಾರ್ಯಾಚರಿಸುತ್ತಿವೆ. ಇದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಡ್ಡಗಾಲಾಗಿದೆ ಎಂಬ ದೂರಿದೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭ ಗೊಳ್ಳುತ್ತಿದ್ದಂತೆ ಯಶವಂತರಾಯಗೌಡ ಸಚಿವರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಸಮಯದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ವ್ಯಕ್ತಿಗೆ ಚುಕ್ಕಾಣಿ ನೀಡಲಾಗಿದೆ. ಬಿಜೆಪಿ ಮುಖಂಡರಾದ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಮನೆಗೆ ಮುಂಜಾನೆ–ಮುಸ್ಸಂಜೆ ಎಡತಾಕುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ’ ಎಂದು ದೂರಿದರು ಎಂದು ಇವೇ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸುಣಗಾರ ಬದಲಾವಣೆ ಸಂದರ್ಭ ಅವರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಈಗಿನ ಅಧ್ಯಕ್ಷರಿಗೆ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಛಾಪಿಲ್ಲ. ಚುನಾವಣಾ ವರ್ಷದಲ್ಲಿ ಸಮರ್ಥರನ್ನು ನೇಮಿಸದಿರುವುದು ಪಕ್ಷಕ್ಕೆ ದೊಡ್ಡ ಹೊಡೆತ’ ಎಂದು ಉಸ್ತು ವಾರಿ ಬಳಿ ದೂರಿದರು ಎನ್ನಲಾಗಿದೆ.

ಇದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು ಎಂದೂ ಹೇಳಲಾಗಿದೆ. ಅದನ್ನು ಲೆಕ್ಕಿಸದೇ ತಮ್ಮ ದೂರು ಮುಂದುವರಿಸಿದ ಯಶವಂತರಾಯ ಗೌಡ ಪಾಟೀಲ, ‘ಪಕ್ಷಕ್ಕೆ ತಮ್ಮ ತಂದೆಯ ಕಾಲದಿಂದಲೂ ನಮ್ಮ ಕುಟುಂಬ ನಿಷ್ಠೆಯಿಂದಿದೆ. ಎಂದೂ ಯಾರ ಜತೆಯೂ ಅಪವಿತ್ರ ಮೈತ್ರಿ ಮಾಡಿ ಕೊಂಡಿಲ್ಲ. ನಿಗಮ–ಮಂಡಳಿಗೆ ಅಧ್ಯಕ್ಷರ ನೇಮಕದ ಸಂದರ್ಭ ಸಚಿವರ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದರೂ ಕ್ಷೇತ್ರದ ಯಾವೊಬ್ಬ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಲಿಲ್ಲ. ಅದು ಸಹ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಮುದ್ದೇಬಿಹಾಳ ಕ್ಷೇತ್ರಕ್ಕೆ ಸಿಕ್ಕಿದೆ.

ಇನ್ನು, ಉಳಿದ ಶಾಸಕರಿಗೆ ಸಂಸದೀಯ ಕಾರ್ಯದರ್ಶಿ, ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ. ಎಲ್ಲ ಚುನಾವಣೆಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿರುವ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗಿದೆ. ಅವಕಾಶ ಗಳಿಂದ ವಂಚಿತಗೊಂಡಿದೆ’ ಎಂದು ಯಶವಂತರಾಯಗೌಡ ದೂರಿದರು ಎಂದು ತಿಳಿದು ಬಂದಿದೆ.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಮ್ಮ ಆಪ್ತ ವಲಯದ ಕೆಲವರಿಗಷ್ಟೇ ಸೀಮಿತವಾಗಿದ್ದಾರೆ. ಇದೇ ಧೋರಣೆ ಮುಂದುವರಿದರೆ ಬಹಳ ಕಷ್ಟವಾಗಲಿದೆ’ ಎಂದು ವೇಣುಗೋಪಾಲ್‌ಗೆ ದೂರಿತ್ತಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇಂಡಿ ಶಾಸಕರ ದೂರಿಗೆ ಸಚಿವ ಎಂ.ಬಿ.ಪಾಟೀಲ ಸಹ ಗರಂ ಆಗಿಯೇ ಪ್ರತ್ಯುತ್ತರ ನೀಡಿದರು. ಇಬ್ಬರ ನಡುವೆ ಕೆಲ ಹೊತ್ತು ವಾಕ್ಸಮರ ನಡೆಯಿತು ಎನ್ನಲಾಗಿದೆ.

*
ವಿಜಯಪುರ ಜಿಲ್ಲೆಯ ಸಭೆ ಅಪೂರ್ಣಗೊಂಡಿದೆ. ಇಬ್ಬರು ಶಾಸಕರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸಂಘಟನೆ ಕುರಿತಂತೆ ಸಭೆ ನಡೆಯಲಿದೆ
-ಯಶವಂತರಾಯಗೌಡ ಪಾಟೀಲ
ಶಾಸಕ, ಇಂಡಿ ಮತಕ್ಷೇತ್ರ

*
ಸಿಂದಗಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಪಟ್ಟಿ ಸಿದ್ಧಗೊಳಿಸಿ. ಭಿನ್ನಾಭಿಪ್ರಾಯ ಬದಿಗೊತ್ತಲು ಜಿಲ್ಲಾ ಹಂತದಲ್ಲೇ ಶಾಸಕರು–ಸಚಿವರ ಜತೆ ಚರ್ಚಿಸಿ ಎಂದು ವೇಣುಗೋಪಾಲ್‌ ಸೂಚಿಸಿದ್ದಾರೆ
-ರವಿಗೌಡ ಪಾಟೀಲ,
ಅಧ್ಯಕ್ಷ, ಕಾಂಗ್ರೆಸ್‌ನ ಜಿಲ್ಲಾ ಘಟಕ

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.