ADVERTISEMENT

‘ಗಂಡಸರು ತಾಯ್ತನದ ಮನಸ್ಸು ಹೊಂದಲಿ’

ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುತ್ಥಳಿ ಅನಾವರಣ: ಶಶಿಕಲಾ ವಸ್ತ್ರದಗೆ ಅಬ್ಬೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 4:59 IST
Last Updated 18 ಜನವರಿ 2017, 4:59 IST

ಬಾಡಗಂಡಿ (ಬಾಗಲಕೋಟೆ): ಹಿರಿಯ ಲೇಖಕಿ ಶಶಿಕಲಾ ವಸ್ತ್ರದ ಅವರಿಗೆ ಇಲ್ಲಿನ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ ದಿಂದ ಈ ವರ್ಷದ  ‘ಅಬ್ಬೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ಇಲ್ಲಿನ ಬಾಪೂಜಿ ಅಂತರ ರಾಷ್ಟ್ರೀಯ ಶಾಲೆ ಆವರಣದಲ್ಲಿ ಮಂಗಳ ವಾರ ರಾತ್ರಿ ನಡೆದ ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಿದರು. ಸಾವಯವ ಪದ್ಧತಿಯಲ್ಲಿ ಎಕರೆಗೆ 57 ಟನ್‌ ಕಬ್ಬು ಬೆಳೆದ ಬೀಳಗಿ ತಾಲ್ಲೂಕು ಗಿರಿಸಾಗರದ ಯಲ್ಲಪ್ಪ ಹೊನ್ನಿಹಾಳ ಅವರಿಗೂ ಇದೇ ವೇಳೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಶಿಕಲಾ ವಸ್ತ್ರದ, ‘ಗಂಡಸರು ಸ್ತ್ರೀವಾದಿ ನೆಲೆಯ ಚಿಂತನೆಗಳು ಹಾಗೂ ತಾಯ್ತ ನದ ಮನಸ್ಥಿತಿ ಹೊಂದಿದಾಗ ಮಾತ್ರ ಮಹಿಳೆಯರ ಮೇಲೆ ಈಗ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಕಾಪಿಡುವ (ರಕ್ಷಿಸುವ) ಗುಣ ಹೆಣ್ಣಿಗಲ್ಲದೇ ಯಾರಿಗೂ ಸಾಧ್ಯವಿಲ್ಲ. ಲಿಂಗ ಬೇಧವಿಲ್ಲದೇ ಎಲ್ಲರಿಗೂ ಈ ಸ್ಪಂದನೆ ಬೇಕಿದೆ. ಸ್ತ್ರೀವಾದಿಯಾದ ತಕ್ಷಣ ಪುರುಷರನ್ನು ದ್ವೇಷಿಸುವುದು ಅಲ್ಲ. ತಾಯಿಯ ಹೃದಯ, ಅಂತಃಕರಣ ಹೊಂದಿರುವ ಗಂಡಸರು ಮಾತ್ರ ಪುರು ಷೋತ್ತಮರು’ ಎಂದು ಬಣ್ಣಿಸಿದರು.

‘ನಮ್ಮ ಆಯುಷ್ಯದ ಪಕ್ಷದ ಹಾರಿ ಹೋಗುವ ಸ್ಥಿತಿಯಲ್ಲಿಯೇ ಇರುತ್ತದೆ. ಅದು ಹಾರಲು ಸನ್ನದ್ಧವಾಗಿ ರೆಕ್ಕೆ ಎತ್ತಿ ನಿಂತಿದೆ. ಈ ಅವಧಿಯಲ್ಲಿ ಬೇಗನೇ ಮನುಷ್ಯ ಕುಲಕ್ಕೆ ಒಳಿತಾಗುವ ಏನನ್ನಾ ದರೂ ಮಾಡು’ ಎಂದು ಪರ್ಷಿಯಾ ದೇಶದ ಕವಿ ಉಮರ್‌ ಖಯ್ಯಾಮ್ ಹೇಳುತ್ತಾರೆ. ಸಾಹಿತ್ಯದ ಮೂಲಕ ಬರುವ ಇಂತಹ ಎಚ್ಚರಿಕೆ ನಮ್ಮನ್ನು ಸದಾ ಪ್ರಬುದ್ಧರನ್ನಾಗಿಸುತ್ತದೆ. ದೀನ–ದಲಿತರು, ಕಾರ್ಮಿಕರು, ರೈತರು, ಕೆಳ ವರ್ಗದವರು ಹಾಗೂ ಅಸಹಾಯಕರ ಬಗ್ಗೆ ಜೀವನ್ಮುಖಿ ಅಂತಃಕರಣ ಬೆಳೆಸಿ ಕೊಳ್ಳುವ ತಾಯ್ತನ ಪ್ರತಿಯೊಬ್ಬರಲ್ಲೂ ನೆಲೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ‘ಮನು ವಿಚಾರಧಾರೆ ಆಧುನಿಕ ಕಾಲಕ್ಕೆ ಒಗ್ಗುವುದಿಲ್ಲ. ಮಹಿಳೆ ಬಾಲ್ಯದಿಂದ–ಮುಪ್ಪಿನವರೆಗೂ ಬೇರೆಯವರ ಆಶ್ರಯದಲ್ಲಿ ಇರಬೇಕು ಎಂದು ಮನು ಹೇಳಿದ್ದನು. ಲಿಂಗ ತಾರತಮ್ಯ ಇಲ್ಲದೇ ಸಾಮಾಜಿಕ ಬದುಕು ಕಟ್ಟಿಕೊಳ್ಳಲು ಸಂವಿಧಾನದ ಮೂಲಕ ಅವಕಾಶ ಮಾಡಿಕೊಟ್ಟ ಅಂಬೇಡ್ಕರ್‌, ಮನುವಿನ ಸಂಕೋಲೆಯಿಂದ ಮುಕ್ತಿ ಹೊಂದುವ ಮಾರ್ಗ ತೋರಿಸಿಕೊಟ್ಟರು ಎಂದರು.

ಕಲಾಂ ಪುತ್ಥಳಿ ಅನಾವರಣ: ಸಮಾ ರಂಭಕ್ಕೂ ಮುನ್ನ ಶಾಲೆಯ ಆವರಣ ದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಂಚಿನ ಪುತ್ಥಳಿ ಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಎ.ಎಸ್.ಕಿರಣ್‌ ಕುಮಾರ ಅನಾವರಣ ಮಾಡಿದರು.

ನಂತರ ಮಾತನಾಡಿ, ದೇಶ 7500 ಕಿ.ಮೀ ವಿಸ್ತೀರ್ಣದ  ಅತಿದೊಡ್ಡ ಕರಾವಳಿ ಪ್ರದೇಶ ಹೊಂದಿದೆ. ಪ್ರತಿ ವರ್ಷ ವಾಯುಭಾರ  ಕುಸಿತದಿಂದ (ಸೈಕ್ಲೋನ್‌)10ರಿಂದ 15 ಸಾವಿರ ಜನ ನೆಲೆ ಕಳೆದುಕೊಳ್ಳುತ್ತಿದ್ದರು.  ಇಸ್ರೋ ಇಂದು ಉಪಗ್ರಹದ ಮೂಲಕ ಮೋಡಗಳು ಚದುರಿದ ಆಧಾ ರದ ಮೇಲೆ ಮಾಹಿತಿ ಸಂಗ್ರಹಿಸಿ 48 ರಿಂದ 96 ಗಂಟೆ ಮುಂಚೆ ನಿಖರವಾಗಿ ಮಾಹಿತಿ ನೀಡಿ ಜನರ ಜೀವ ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.

ಬಿದ್ದು ಗಾಯಗೊಂಡ ಜಿಲ್ಲಾಧಿಕಾರಿ..
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಂಚಿನ ಪುತ್ಥಳಿ ಅನಾವರಣದ ವೇಳೆ ಇಸ್ರೋ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ ಅವರನ್ನು ಸ್ವಾಗತಿಸಲು ಶಾಲೆಯ ಮುಖ್ಯ ದ್ವಾರದ ಬಳಿ ಗಣ್ಯರೊಂದಿಗೆ ಬಂದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣ ವರ, ಆಯ ತಪ್ಪಿ ಗುಂಡಿಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡರು. ಕೂಡಲೇ ಅವರನ್ನು ಬಾಗಲ ಕೋಟೆಯ ಖಾಸಗಿ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.