ADVERTISEMENT

ಗಮಕ ಕಲೆ... ‘ಸರಸ್ವತಿಯ ಬೆಡಗು, ಬಿನ್ನಾಣ’

ಗಮಕ ಕಲೆಯ ಶ್ರೀಮಂತಿಕೆ ಪರಿಚಯಿಸಿದ 11ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:42 IST
Last Updated 11 ಜನವರಿ 2017, 6:42 IST
ವಿಜಯಪುರ ನಗರದಲ್ಲಿ ಮೂರು ದಿನ ನಡೆದ 11ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದಲ್ಲಿ ಗಮಕ ವಾಚಿಸಿದ  ಕಲಾವಿದ
ವಿಜಯಪುರ ನಗರದಲ್ಲಿ ಮೂರು ದಿನ ನಡೆದ 11ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದಲ್ಲಿ ಗಮಕ ವಾಚಿಸಿದ ಕಲಾವಿದ   

ವಿಜಯಪುರ: ನಗರದಲ್ಲಿ ಮೂರು ದಿನ ನಡೆದ 11ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ಗಮಕ ಕಲೆಯ ಸಿರಿವಂತಿಕೆ ಪರಿಚಯಿಸಿತು. ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಗಮಕ ಕಲಾವಿದರು ಗಮಕ ವಾಚಿಸಿ, ವ್ಯಾಖ್ಯಾನಿಸಿ ಗಮಕ ಕಲೆಯ ರಸದೌತಣ ಉಣಬಡಿಸಿದರು.

ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನವೂ ಗಮಕ ಕಲೆಯ ಸಿರಿವಂತಿಕೆ ಪ್ರದರ್ಶನಕ್ಕೆ ವಿಜಯಪುರ ವೇದಿಕೆಯಾಯಿತು. ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಗಮಕ ಕಲಾವಿದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಗಮಕ ವಾಚನದ ಮೂಲಕವೇ ಗಮಕ ಕಲೆಯ ಶ್ರೀಮಂತಿಕೆ ವಿವರಿಸಿದರು.

‘ಕನ್ನಡ ನುಡಿ ನಾಟ್ಯದ ತೆರೆಯುನ್ನತ ಸಂಗೀತರವದ ಸಾಹಿತ್ಯ ರಸಂಬಣ್ಣಿಸುವೊಡೆ ನಿಜ ಸರಸ್ವತಿಬಿನ್ನಾಣವ ತೋರ್ಪ ಗಮಕವಾರ್ಧ ವಿಶೇಷಂ... ಎಂದು ಗಮಕ ಕಲೆಯ ವೈಭವವನ್ನು ವಿವರಿಸಿದರು.

ಈ ಗಮಕ ವಾಚಿಸಿದ ನಂತರ ವ್ಯಾಖ್ಯಾನಿಸಿದ ಅವರು ‘ಗಮಕ ಎಂಬುದು ಒಂದು ಮಹಾ ಸಮುದ್ರ. ಕನ್ನಡ ಭಾಷೆಯ ನಾಟ್ಯವೇ ಇದರ ಎತ್ತರದ ತೆರೆಗಳು. ಸಂಗೀತವೇ ಇದರ ಮೊರೆತ, ವಿಸ್ತಾರವಾದ ಸಾಹಿತ್ಯವೇ ಇದರ ಜಲರಾಶಿ. ಅಕ್ಷರಶಃ ಬಣ್ಣಿಸುವುದಾದರೆ ಇದುವೇ ಸರಸ್ವತಿಯ ಬೆಡಗು, ಬಿನ್ನಾಣ ಎಂದು ಗಮಕ ಕಲೆಯನ್ನು ವರ್ಣಿಸಿದರು.

ಯಜ್ಞೇಶ ಸುರತ್ಕಲ್ ‘ಜನ್ನನ ಯಶೋಧರ ಚರಿತೆ’ಯಲ್ಲಿ ಚಂಪೂ- ಬಿಗುಮಾನವನ್ನು ವಾಚನದ ಮೂಲಕ ಮಂಡಿಸಿದರು. ಕುಮಾರವ್ಯಾಸ ಭಾರತ ಷಟ್ಪದಿ-ಭಾಮಿನಿಯ ವೈಯಾರವನ್ನು ತುಮಕೂರಿನ ಗಮಕಿ ಲಕ್ಷ್ಮೀಜಯಪ್ರಕಾಶರು ನವರಸ ರಾಗಗಳಲ್ಲಿ ವಾಚಿಸಿದರು.

ಕನಕದಾಸರ ಮೋಹನ ತರಂಗಿಣಿಯ ಸಾಂಗತ್ಯ ಸಂಗಾತಿಯನ್ನು ಗಮಕಿ ಚಂದ್ರಿಕಾ ಕಾಟ್ವೆ ಹರಿಹರ ಸುಶ್ರಾವ್ಯವಾಗಿ ವಾಚಿಸಿದರು. ಕುವೆಂಪು ರಾಮಾಯಣ ದರ್ಶನಂನ ಮಹಾ ಛಂದಸ್ಸಿನ ವೈಭವ ವನ್ನು ಮೈಸೂರಿನ ಕಲಾಶ್ರೀ ಬಿ.ಎಚ್. ನಾಗರತ್ನಮ್ಮ ತಮ್ಮ ವಾಚನದ ಮೂಲಕ ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಪದ್ಮಿನಿ ರಾಮಮೂರ್ತಿ ಸಹ ಚಂಪೂ, ಸಾಂಗತ್ಯ, ಮಹಾ ಛಂದಸ್ಸಿನ ವಿಚಾರ ಪ್ರಸ್ತುತಪಡಿಸಿದರು. ಸಾಹಿತಿ ಕೆ.ಸುನಂದಾ ಗೋಷ್ಠಿಯನ್ನು ನಿರ್ವಹಿಸಿದರು.
ಎರಡನೇ ಗೋಷ್ಠಿಯಲ್ಲಿಯೂ ಲಕ್ಷ್ಮೀಶನ ಜೈಮಿನಿ ಭಾರತದ ಜ್ವಾಲೆಯ ಪ್ರಸಂಗ ಭಾಗದ ವಾಚನವನ್ನು ಮುಂಬಯಿಯ ಶಾಮಲಾ ಪ್ರಕಾಶ, ಧಾರವಾಡದ ಗಾಯತ್ರಿ ಸರದೇಶಪಾಂಡೆ, ಶಿವಮೊಗ್ಗದ ಹೊಸಹಳ್ಳಿಯ ವಿದ್ವಾನ್ ರಾಜಾರಾಮ ಮೂರ್ತಿ ವ್ಯಾಖ್ಯಾನಿಸಿದರು. ದಾಕ್ಷಾಯಿಣಿ ಬಿರಾದಾರ ನಿರ್ವಹಿಸಿ ದರು. 

ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ರಾಯಚೂರು ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನವಿರುವ ಸಂದರ್ಭ ವಿರುವುದು. ಹಳಗನ್ನಡ ಕಾವ್ಯಗಳಲ್ಲಿ ಅದು ಮೂಡಿಬರುವಂತದ್ದು ಗಮಕ ಶೈಲಿಯಲ್ಲಿ. ಜೈಮಿನಿ ಭಾರತವು ರಸಭಾವ, ಕವಿಕಾವ್ಯ, ವಿಚಾರದಿಂದ ಕೂಡಿದೆ ಎಂದು ರಸವತ್ತಾಗಿ ವಿವರಣೆ ನೀಡಿದರು.

‘ರನ್ನ ಶಕ್ತಿ ಮತ್ತು ಜಾಣ ಕವಿ...’
ಮೂರನೇ ಗೋಷ್ಠಿ ರನ್ನ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿತು. ‘ರನ್ನ ಗನ್ನಡಿ’ ರನ್ನ ಮಹಾಕವಿಯ ‘ಸಾಹಸ ಭೀಮ ವಿಜಯ’ದ ಮಹತ್ವವನ್ನು ಹಿಡಿದಿಡುವ ಗೋಷ್ಠಿಯಾಗಿತ್ತು.

‘ಗದಾಯುದ್ಧ’ ಭಾಗದ ‘ರಣರಂಗ’ ಕುರುಕ್ಷೇತ್ರದಲ್ಲಿನ ಭಾಗವನ್ನು ಗಮಕಿ ಬೆಳಗಾವಿಯ ಭಾರತಿ ಭಟ್ಟ, ಬೆಂಗಳೂರಿನ ಜಯರಾಮ ಸುಶ್ರಾವ್ಯವಾಗಿ ವಾಚಿಸಿದರು. ಟಿ.ವಿ.ಮೀರಾ ಸಮರ್ಥ ರೀತಿಯಲ್ಲಿ ವ್ಯಾಖ್ಯಾನಿಸಿದರು.

ರನ್ನನ ಕೃತಿ ರತ್ನ ಕುರಿತು ಉಪನ್ಯಾಸ ಮಂಡಿಸಿದ ಡಾ.ಎಂ.ಎಸ್.ಮದಬಾವಿ ರನ್ನ ಶಕ್ತಿ ಕವಿ. ರತ್ನತ್ರಯರಲ್ಲಿ ಒಬ್ಬನಾದ ಅವನು ಗದಾಯುದ್ಧ, ಅಜಿತನಾಥ ಪುರಾಣಗಳನ್ನು ರಚಿಸಿದ್ದಾನೆ. ಅವಿಭಜಿತ ವಿಜಯಪುರ ಜಿಲ್ಲೆಯ ಮುಧೋಳ ಅಂದಿನ ಮುದವೊಳಲು. ಶಕ್ತಿ ಕವಿಯಂತೆ ಜಾಣ ಕವಿಯಾಗಿ ಪಂಪ ಭಾರತದ ಕೊನೆ ಭಾಗವನ್ನಾಧರಿಸಿಕೊಂಡು ರಚಿಸಿದ್ದು ಗದಾಯುದ್ಧ ಕೃತಿ ಎಂದು ರನ್ನ ಸಾಹಿತ್ಯದ ಕುರಿತು ಬೆಳಕು ಚೆಲ್ಲಿದರು. ಗಮಕಿ ಎಂ.ಆರ್.ಬದರಿಪ್ರಸಾದ ನಿರೂಪಿಸಿದರು. ಪ್ರೊ.ಎಸ್.ಎಸ್.ಕನಮಡಿ ಅಧ್ಯಕ್ಷತೆ ವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT