ADVERTISEMENT

‘ಗಾಂಧೀಜಿ ಸ್ವರಾಜ್ಯದ ಕನಸು ನನಸು ಭಾರತೀಯ ಜನಶಕ್ತಿ ಕಾಂಗ್ರೆಸ್ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:56 IST
Last Updated 20 ಮಾರ್ಚ್ 2018, 10:56 IST

ಬಸವನಬಾಗೇವಾಡಿ: ‘ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಲಾಗಿದೆ’ ಎಂದು ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಹೇಳಿದರು.

ಸ್ಥಳೀಯ ಬಸವಜನ್ಮ ಸ್ಮಾರಕದಲ್ಲಿ ಭಾನುವಾರ ಪಕ್ಷದ ಚಿಹ್ನೆ (ಬೆಂಡೆಕಾಯಿ) ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಜಾತೀಯತೆಯನ್ನು ಹೊಡೆದೋಡಿಸುವುದಕ್ಕಾಗಿ ಬಸವಣ್ಣನವರು 12ನೇ ಶತಮಾನದಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿಯೇ ಯುಗಾದಿ ದಿನದಂದು ಪಕ್ಷದ ಚಿಹ್ನೆಯನ್ನು ಬಿಡುಗಡೆಗೊಳಿಸಲು ನಿರ್ಣಯಿಸಲಾಗಿತ್ತು’ ಎಂದು ಹೇಳಿದರು.

ADVERTISEMENT

‘ಈಗಷ್ಟೆ ಉದಯಿಸಿದ ಪಕ್ಷ ನಮ್ಮದು. ಚುನಾವಣಾ ಆಯೋಗವು ನೀಡಿರುವ ಬೆಂಡೆಕಾಯಿ ನಮ್ಮ ಪಕ್ಷದ ಚಿಹ್ನೆಯಾಗಿದೆ. ಜನಪರ ಹಾಗೂ ಕಾನೂನುಪರ ಆಡಳಿತ ಜಾರಿಗೆ ಬರಬೇಕು. ಮಾನವೀಯತೆಯಿಂದ ಕೂಡಿದ ಆಡಳಿತ ನೀಡುವುದು ಪಕ್ಷದ ಉದ್ದೇಶವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿ ಸಲಿದ್ದಾರೆ. ನಾನು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ’ ಎಂದು ಹೇಳಿದರು.

‘ಧಾರ್ಮಿಕ, ಜಾತಿಯ, ಭಾಷಿಕ ತಾರತಮ್ಯ ಹೋಗಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಮಹಿಳೆಯರು ಎದುರಿಸುವ ಕಷ್ಟಗಳಿಗೆ ಸ್ಪಂದಿಸುವಂತಾಗ
ಬೇಕು. ಭಯಮುಕ್ತ ಸಮಾಜ ನಿರ್ಮಾಣವಾಗಬೇಕು. ಹೀಗೆ ಹಲವು ಉದ್ದೇಶಗಳನ್ನು ಇಟ್ಟುಕೊಂಡು ನಮ್ಮ ಪಕ್ಷ ಶಾಂತಿಯಿಂದಲೇ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಯಾಗುವಂತೆ ನೋಡಿಕೊಳ್ಳುತ್ತದೆ. ಸ್ವಾರ್ಥ ಭಾವನೆ ಬದಿಗೊತ್ತಿ ಜನಪರ ಕಾಳಜಿ ಹೊಂದಿದ ಹೊಸಬರಿಗೆ ಪಕ್ಷ ಅವಕಾಶ ನೀಡಲಿದೆ’ ಎಂದು ಹೇಳಿದರು.

‘ಚಿತ್ರನಟ ಉಪೇಂದ್ರ ಅವ ರೊಂದಿಗೆ ಯಾವುದೇ ರೀತಿಯ ಮಾತಕತೆಯಾಗಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ’ ಎಂದೂ ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಾದೇವಬಾಬು ಉದಗಾವಿ, ವಲಯ ವಲಯ ಘಟಕದ ಅಧ್ಯಕ್ಷ ಶರಣಪ್ಪ ಝಳಕಿ, ಮಲ್ಲಿಕಾರ್ಜುನ ಜಕಾತಿ, ಅಚ್ಯುತ ಶೆಣೈ, ಎ.ಜಿ.ನ್ಯಾಮಗೌಡರ, ಸಂಜೀವ ಪಾಟೀಲ, ಸಂಗನಗೌಡ ಬಿರಾದಾರ, ಎಂ.ಎಚ್ ಪ್ರವೀಣ, ಬಿ.ಸಿ ನಾಲತವಾಡ ಹಾಗೂ ಎ.ಎಂ ದುಂಡಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.