ADVERTISEMENT

ಗುಣಮಟ್ಟ ಕಾಪಾಡಿಕೊಳ್ಳಲು ಸಲಹೆ

ಉಚ್ಚ ಶಿಕ್ಷಣ ಕುರಿತು ವಿಭಾಗಮಟ್ಟದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 12:08 IST
Last Updated 23 ಜನವರಿ 2017, 12:08 IST
ಗುಣಮಟ್ಟ ಕಾಪಾಡಿಕೊಳ್ಳಲು ಸಲಹೆ
ಗುಣಮಟ್ಟ ಕಾಪಾಡಿಕೊಳ್ಳಲು ಸಲಹೆ   

ಸೊಲ್ಲಾಪುರ: ‘ಇಂದಿನ ಜಾಗತೀಕರಣ ದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ಬಹುಮುಖ್ಯ. ಇದಕ್ಕಾಗಿಯೇ ರಚನೆಯಾಗಿರುವ ನ್ಯಾಕ್ ಕಮಿಟಿ ಸೂಚಿಸುವ ಎಲ್ಲ ಅಂಶಗಳನ್ನು ಮಹಾವಿದ್ಯಾಲಯಗಳು ಜಾರಿಗೆ ತರುವ ಮೂಲಕ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಮಾಹೇಶ್ವರಯ್ಯ ಅಭಿಪ್ರಾಯ ಪಟ್ಟರು.

ಅಕ್ಕಲಕೋಟದ ಖೇಡಗಿ ಶಿಕ್ಷಣ ಸಂಸ್ಥೆಯಲ್ಲಿ ಸೊಲ್ಲಾಪುರ ವಿಶ್ವ ವಿದ್ಯಾಲಯ ಮತ್ತು ಖೇಡಗಿ ಮಹಾ ವಿದ್ಯಾಲಯದ ಸಹಯೋಗದಲ್ಲಿ ‘ಉಚ್ಚ ಶಿಕ್ಷಣದಲ್ಲಿಯ ಗುಣಮಟ್ಟ ಮತ್ತು ತಂತ್ರ ಜ್ಞಾನ ಆಧರಿತ ಅಧ್ಯಯನ- ಅಧ್ಯಾಪನ ಪದ್ಧತಿ’ ಎಂಬ ವಿಷಯ ಕುರಿತ  ವಿಭಾಗಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಉಚ್ಚ ಶಿಕ್ಷಣದಲ್ಲಿ ಬೋಧನೆ, ಸಂಶೋಧನೆ, ಪಠ್ಯಕ್ರಮ, ವಿದ್ಯಾರ್ಥಿಗಳ ಕಲಿಕೆ, ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಕೊಡುವ ಬೆಂಬಲ ಸೇರಿದಂತೆ ಹಲವು ಸಂಗತಿಗಳು ಗುಣ ಮಟ್ಟದ ಶಿಕ್ಷಣಕ್ಕೆ ಹೇಗೆ ಸಹಕಾರಿ ಯಾಗುತ್ತವೆ ಎಂಬುವ ಕುರಿತು ವಿವರಿಸಿದರು.

ಸೊಲ್ಲಾಪುರ ವಿ.ವಿ ಕುಲಪತಿ ಡಾ.ಎನ್.ಎಂ.ಮಾಲದಾರ ಮಾತ ನಾಡಿ, ‘ಉಚ್ಚ ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಅಧ್ಯಾಪಕರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು’ ಎಂದರು. ಮುಂಬೈ ಮೂಲದ ಅಮಿತ ಸಂಸಾರೆ ಅಧ್ಯಾಪನದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.

ಡಾ.ಶ್ರೀರಾಮ ನಾರ್ಲೇಕರ, ಪ್ರೊ.ಜಯಶ್ರೀ ಬಿರಾಜದಾರ, ಪ್ರೊ.ಅಪ್ಪಾ ಸಾಹೇಬ ದೇಶಮುಖ ಮಾತನಾಡಿದರು.ಶಿಕ್ಷಣ ಸಂಸ್ಥೆಯ ಚೇರಮನ್ ಶಿವಶರಣ ಖೇಡಗಿ ಅಧ್ಯಕ್ಷತೆ ವಹಿಸಿದ್ದರು. ನೂತನ ನಗರ ಸೇವಕ ಬಸವಲಿಂಗಪ್ಪ ಖೇಡಗಿ, ಸಂಸ್ಥೆಯ ಉಪಾಧ್ಯಕ್ಷ ಸಿ.ಬಿ. ಪಾಟೀಲ, ಸಂಚಾಲಕರಾದ ಅನಿಲ ಮಂಗರೂಳೆ, ಸಿದ್ಧಾರಾಮ ಬಿರಾಡೆ, ಪ್ರಾಂಶುಪಾಲ, ಡಾ.ಭೀಮಾಶಂಕರ ಪೀರಗೊಂಡೆ, ಪ್ರೊ.ದತ್ತಾತ್ರೇಯ ಫುಲಾರಿ, ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಗುರಲಿಂಗಪ್ಪ ಧಬಾಲೆ, ಸಮನ್ವಯಕಾರ ಪ್ರೊ.ಕಿಸನ ಝಿಪರೆ ಮತ್ತಿತರರು ಇದ್ದರು. ಡಾ.ಶಿವರಾಯ ಅಡವಿತೋಟೆ ಸ್ವಾಗತಿಸಿದರು. ಡಾ. ಇಫ್ತೆಖಾರ ಖೈರದಿ ಮತ್ತು ಪ್ರೊ.ಸಂಧ್ಯಾ ಇಂಗಳೆ ಪರಿಚಯಿಸಿದರು. ಪ್ರೊ.ಸಂಧ್ಯಾ ಪರಾಂಜಪೆ  ನಿರೂಪಿಸಿ, ಪ್ರೊ.ವೀರಭದ್ರ ಮೋದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.