ADVERTISEMENT

‘ಜಾನಪದ ತಿರಸ್ಕಾರ ಮನೋಭಾವ ಸಲ್ಲ’

ಬಸವನ ಬಾಗೇವಾಡಿಯಲ್ಲಿ ನಡೆ ವಿಚಾರ ಸಂಕಿರಣದಲ್ಲಿ ಡಾ. ವಿ.ಎಲ್‌. ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:08 IST
Last Updated 8 ಫೆಬ್ರುವರಿ 2017, 9:08 IST

ಬಸವನಬಾಗೇವಾಡಿ: ಜಾನಪದ ಸಂಸ್ಕೃತಿ ಶ್ರೇಷ್ಠವಾದುದು. ಅದಕ್ಕೆ ಭವ್ಯ ಪರಂಪರೆ ಇದೆ. ಅಂತಹ ಜಾನಪದವನ್ನು ಇಂದು ತಿರಸ್ಕೃತವಾಗುತ್ತಿರುವುದು ವಿಷಾದಕರ ಸಂಗತಿ. ಜಾನಪದ ಭಾಷೆಯನ್ನು ಹಾಸ್ಯಾಸ್ಪದವಾಗಿ ಬಳಕೆಯಾಗುತ್ತಿರುವುದು ಸರಿಯಲ್ಲ ಎಂದು  ಕರ್ನಾಟಕ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ವಿ.ಎಲ್‌.ಪಾಟೀಲ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಪದವಿ ತರಗತಿಗಳ ’ಜಾನಪದ ಸಾಹಿತ್ಯ’ ವಿಷಯದ ಪಠ್ಯಕ್ರಮ ರಚನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದವನ್ನು ತಿರಸ್ಕಾಕಾರ ಭಾವನೆಯಿಂದ ನೋಡಲಾಗುತ್ತಿದೆ. ಚಲನಚಿತ್ರಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರ ಸಂಖ್ಯೆ ಕಡಿಮೆ ಇದೆ. ಕೆಲವೊಮ್ಮೆ ಉತ್ತರ ಕರ್ನಾಟಕದ ಜಾನಪದ ಭಾಷೆ ಬಳಸಿದ್ದರೂ ಅದನ್ನು ಹಾಸ್ಯಾಸ್ಪದವಾಗಿ ಬಳಸಲಾಗುತ್ತಿದೆ. ಎಲ್ಲ ವಿಷಯಗಳ ತಾಯಿ ಜಾನಪದ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಒಪ್ಪಿ ಕೊಂಡಿದ್ದರಿಂದ ನಮ್ಮ ಸಂಸ್ಕೃತಿಗೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ನಾವು ನಮ್ಮ ಸಂಸ್ಕೃತಿಯನ್ನು ಕೀಳಾಗಿ ಕಾಣುತ್ತಿದ್ದೇವೆ. ನಮ್ಮ ತಾಯಿ ಭಾಷೆಯನ್ನು ಪ್ರೀತಿಸಿದಾಗ ಅದು ಉಳಿಯುತ್ತದೆ. ಯೋಗ, ಆಯುರ್ವೇದ, ದೇಶಿಯ ಪದ್ದತ್ತಿಗಳು ಸೇರಿದಂತೆ ಪ್ರಾದೇಶಿಕ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಸುತ್ತ ಮುತ್ತಲಿನ ಜಾನಪದ ಸಂಸ್ಕೃತಿಯನ್ನು ತಿಳಿಸಿಕೊಡುವ ಅಗತ್ಯತೆ ಇದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪಠ್ಯದ ಓದಿನೊಂದಿಗೆ ಕ್ಷೇತ್ರ ಕಾರ್ಯವನ್ನು ನೀಡುವುದರಿಂದ ಅವರು ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗುತ್ತಾರೆ ಎಂದು ಹೇಳಿದರು.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಶಾಸ್ತ್ರೀಯ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಗುಂಡಣ್ಣ ಕಲಬುರ್ಗಿ ಮಾತನಾಡಿ, ಜಾನಪದ ಸಾಹಿತ್ಯವನ್ನು ಇಂದು ಮುಖ್ಯ ವಾಹಿನಿಗೆ ತರಬೇಕಿದೆ. ಜಾನಪದ ಸಾಹಿತ್ಯದಿಂದ ಸಂಸ್ಕಾರ ಹೆಚ್ಚಳವಾಗಬೇಕು ಜೊತೆಗೆ ಉದ್ಯೋಗ ಮುಖಿಯಾದ ಶಿಕ್ಷಣ ಸಿಗಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಸುರಪುರದ ಪ್ರಭು ಕಲಾ, ವಿಜ್ಞಾನ, ಜೆ.ಎಂ.ಬಿ. ವಾಣಿಜ್ಯ ಮಹಾ ವಿದ್ಯಾಲಯ ದ ಪ್ರಾಚಾರ್ಯ ಶ್ರೀಶೈಲ ನಾಗರಾಳ ಅವರು ’ಪಠ್ಯಕ್ರಮ ಕುರಿತ ಆಲೋಚನೆ ಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಪಿ. ನೀಲಕಂಠಮಠ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್‌.ಆರ್‌.ಮಠ ಮಾತ ನಾಡಿದರು. ಪ್ರೊ.ಬಿ.ಬಿ. ಡೆಂಗನವರ ಸ್ವಾಗತಿಸಿದರು. ಪ್ರೊ.ಪಿ.ಎಲ್‌.ಹಿರೇಮಠ ನಿರೂಪಿಸಿದರು. ಪ್ರೊ.ಎಂ.ಜಿ.ಹಳ್ಳದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.