ADVERTISEMENT

ತಂದೆ–ತಾಯಿ ಪಾದಪೂಜೆ ಸಂಭ್ರಮ

ಶಾಲಾ ಆವರಣದಲ್ಲಿ ‘ಅಮ್ಮನ ಕೈ ತುತ್ತು’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 8:45 IST
Last Updated 6 ಮಾರ್ಚ್ 2017, 8:45 IST
ಸಿಂದಗಿ: ವೃದ್ಧಾಶ್ರಮಗಳು ಹೆಚ್ಚುತ್ತಿರುವ ಇಂದಿನ ಆಧುನಿಕ ಸಂಕೀರ್ಣ ಸಮಾಜ ದಲ್ಲಿ ತಂದೆ–ತಾಯಿ–ಮಕ್ಕಳ ಸಂಬಂಧ ಗಟ್ಟಿಗೊಳಿಸಿ ಇಡೀ ಸಮಾಜಕ್ಕೆ ಒಂದು ಮಹತ್ವದ ಸಂದೇಶ ರವಾನಿಸಿದ ಸಮಾರಂಭ ಇಲ್ಲಿ ನಡೆದಿದೆ.
 
ನಗರದ ಸುಷ್ಮಾ ಪಬ್ಲಿಕ್ ಶಾಲೆ ಮತ್ತು ಶಾಂತಿನಿಕೇತನ ಪ್ರಾಥಮಿಕ ಶಾಲಾ ಆವರಣದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ ಅಮ್ಮನ ಕೈ ತುತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 
ಶಾಲಾ ಮೈದಾನದಲ್ಲಿ ನೂರಾರು ಜೋಡಿಗಳು (ತಂದೆ–ತಾಯಿ) ತಮ್ಮ ಮಕ್ಕಳ ಎದುರು ಕುಳಿತುಕೊಂಡಿದ್ದರು. ಮೊದಲಿಗೆ ಮಕ್ಕಳು ತಮ್ಮ ತಂದೆ–ತಾಯಿಗಳ ಪಾದಪೂಜೆ ಮಾಡಿ ಗೌರವ ದಿಂದ ನಮಸ್ಕರಿಸಿದರೆ ನಂತರ ಅಮ್ಮ ತನ್ನ ಮಗುವಿಗೆ ಕೈ ತುತ್ತು ನೀಡಿದಳು.
 
ನಂತರ ಪಾಲಕರು ಶಾಲೆ ಹಮ್ಮಿಕೊಂಡ ವೈಶಿಷ್ಟ್ಯಪೂರ್ಣ ಸಮಾ ರಂಭ ಕುರಿತಾಗಿ ಗುಣಗಾನ ಮಾಡಿದರು. ಇಲ್ಲಿಯ ಕಲ್ಯಾಣನಗರ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮನಗೂಳಿ ಕಾರ್ಯಕ್ರಮ ಕುರಿತು ಮಾತನಾಡಿ, ಶಾಲೆಗಳಿಂದು ಇಂಥ ಸಂಸ್ಕಾರ ಪ್ರಸಾರ ಮಾಡುವ ಮಹತ್ವದ ಕಾರ್ಯ ಮಾಡಬೇಕಿದೆ ಎಂದರು.
 
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧಲಿಂಗ ಚೌಧರಿ, ‘ನಿಜವಾದ ದೇವತೆ ತಾಯಿ. ತಾಯಿ ಆಶೀರ್ವಾದ ಬಲವಿದ್ದರೆ ಮಗು ಏನೆಲ್ಲ ಸಾಧಿಸಬಹುದು’ ಎಂದು ಹೇಳಿದರು.
 
ಅಶೋಕ ಅಲ್ಲಾಪುರ, ಸುನಂದಾ ಕಕ್ಕಳಮೇಲಿ, ಅಕ್ಕಮಹಾದೇವಿ ಪಡೇ ಕನೂರ,  ಮುಖ್ಯಗುರು ಎಂ.ಜಿ. ಬಿರಾದಾರ ಮಾತನಾಡಿದರು.
ವಿದ್ಯಾರ್ಥಿ ಪ್ರತಿನಿಧಿ ಶಶಾಂಕ ಪಾಟೀಲ, ಬಾಲಕಿಯರ ಪ್ರತಿನಿಧಿ ಲಕ್ಷ್ಮಿ ಅಳ್ಳಗಿ, ಶಾಲೆಯ ಸಂಚಾಲಕ  ಶರಣ ಗೌಡ ಬಿರಾದಾರ, ಶಿವಕುಮಾರ ಬಿರಾದಾರ, ಶಿಕ್ಷಕರಾದ ರಾಘು ಜೋಶಿ, ಎಂ.ಬಿ.ಅಗಸರ, ಸಾವಿತ್ರಿ ಬಿರಾದಾರ, ಶೈಲಜಾ ಹಿರೇಮಠ, ಗೀತಾ ರೂಗಿ, ಶಾಂತಾ ಕೋರಳ್ಳಿ, ಚನ್ನಮ್ಮ ವಡ್ಡರ, ನಿವೇದಿತಾ ಹಡಪದ ಕಾರ್ಯಕ್ರಮ ಸಂಘಟಿಸಿದ್ದರು. ಉಮಾ ಅಲ್ಲಾಪೂರ ಸ್ವಾಗತಿಸಿ, ವಿಜಯಲಕ್ಷ್ಮಿ ಯರನಾಳ ನಿರೂಪಿಸಿದರು. ರಾಘವೇಂದ್ರ ನಾಯಕ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.