ADVERTISEMENT

‘ತಪ್ಪಿಗೆ ಶಿಕ್ಷೆಯಾಗಲಿ; ರಾಜಕೀಯ ನಿಲ್ಲಲಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 8:34 IST
Last Updated 28 ಜನವರಿ 2017, 8:34 IST
‘ತಪ್ಪಿಗೆ ಶಿಕ್ಷೆಯಾಗಲಿ; ರಾಜಕೀಯ ನಿಲ್ಲಲಿ’
‘ತಪ್ಪಿಗೆ ಶಿಕ್ಷೆಯಾಗಲಿ; ರಾಜಕೀಯ ನಿಲ್ಲಲಿ’   

ವಿಜಯಪುರ: ‘ನನ್ನ ಮಗ ತಪ್ಪು ಮಾಡಿದ್ದಾನೆ ಎಂದು ಪೊಲೀಸರು ಹೇಳಿ ದ್ದಾರೆ. ಆ ತಪ್ಪಿಗೆ ಯಾವ ಶಿಕ್ಷೆ ಬೇಕಾದರೂ ನೀಡಿ. ಆದರೆ ಬಸವೇಶ್ವರರ ಹೆಸರಿನಲ್ಲಿ ನಡೆಯುತ್ತಿ ರುವ ‘ರಾಜಕಾರಣ’ವನ್ನು ದಯವಿಟ್ಟು ನಿಲ್ಲಿಸಿ’ ಎಂದು ಪ್ರಕರಣದ ಪ್ರಮುಖ ಆರೋಪಿ ಅರ್ಜುನನ ತಂದೆ, ನಿಡೋಣಿ ತಾಲ್ಲೂಕು ಪಂಚಾಯ್ತಿ ಕ್ಷೇತ್ರದ ಬಿಜೆಪಿ ಸದಸ್ಯ ಲಕ್ಷ್ಮಣ ಗುಣದಾಳ ಮನವಿ ಮಾಡಿದರು.

‘ಇದೇ 14ರ ಶನಿವಾರ ರಾತ್ರಿ ನಮ್ಮೂರಿನಲ್ಲಿ ನಡೆದ ಅಪಮಾನಕರ ಘಟನೆ ಖಂಡಿಸಿ, ಗ್ರಾಮದ ಪ್ರಮುಖರೊಂದಿಗೆ ನಾನೇ ಸ್ವತಃ ಬಬಲೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೆ ’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗ್ರಾಮದಲ್ಲಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗಾಗಿ ಶ್ರಮಿಸಿರುವೆ. ಮಗ ಮಾಡಿರುವ ಕೆಲಸದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ತಪ್ಪಿಗೆ ಕಾನೂನಿನಡಿ ಬೇಕಾದ ಶಿಕ್ಷೆ ವಿಧಿಸಿ. ಆದರೆ ಈ ವಿಷಯದಲ್ಲಿ ರಾಜಕಾರಣ ಮಾತ್ರ ಬೆರೆಸಬೇಡಿ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಕಿವಿಮಾತು ಹೇಳಿದರು.

‘ಇದೇ 20ರಂದು ಶಿವಪ್ಪ ಬಾಗಿ ಹಾಗೂ ನನ್ನನ್ನು ಬಬಲೇಶ್ವರ ಪೊಲೀಸ್ ಠಾಣೆಗೆ ಕರೆಸಿದ ಪೊಲೀಸರು ನಿಮ್ಮ ಮಗನ ಮೊಬೈಲ್ ನಂಬರ್‌ ಘಟನೆ ನಡೆದ ದಿನ ಹಾಗೂ ಸಮಯದಲ್ಲಿ ಸ್ಥಳೀಯ ಟವರ್‌ನಲ್ಲಿ ಬಂದಿದ್ದು ಆತನನ್ನು ವಿಚಾರಣೆಗೆ ಕಳುಹಿಸಲು ಕೇಳಿದಾಗ ನನಗೆ ಆಶ್ಚರ್ಯವಾಯಿತು. ನಾನೇ ನನ್ನ ಮಗನನ್ನು ಸ್ವತಃ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದೇನೆ, ಅಂದಿನಿಂದ ಆತನನ್ನು ಭೇಟಿಯಾಗಿಲ್ಲ’ ಎಂದರು.

‘ತಾಲ್ಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ ಈಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ನನ್ನ ಮಗ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾನೆ. ಅಪ್ಪ ಚುನಾವಣೆಗೆ ನಿಂತಾಗ ಮಗ ದುಡಿದಿದ್ದಾನೆ. ಅಪ್ಪನ ಪಕ್ಷವನ್ನು ಎಲ್ಲ ಚುನಾವಣೆಗಳಲ್ಲಿ ಬೆಂಬಲಿಸಿದ್ದಾನೆ. ನೀವೂ ಯಾವ ರೀತಿ ಬೇಕಾದರೂ ಅರ್ಥೈಸಿಕೊಳ್ಳಿ’ ಎಂದು ಕಲ್ಲಪ್ಪ ಗುಣದಾಳ ಮುಗ್ಧವಾಗಿ ನುಡಿದು, ಕಣ್ಣೀರಿಟ್ಟರು.

ಚನ್ನವೀರ ವಿದ್ಯಾಸಂಸ್ಥೆಯ ಅಧ್ಯಕ್ಷರ ಮಗ, ಮತ್ತೊಬ್ಬ ಆರೋಪಿ ಸುಭಾಸ ಕಲ್ಲಪ್ಪ ಗುಣದಾಳ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ರಮೇಶ ಶಿವನಗೌಡ ಪಾಟೀಲ ಯಾವುದೇ ಪಕ್ಷದ ಅನುಯಾಯಿ ಅಲ್ಲ ಎಂದು ಇದೇ ಸಂದರ್ಭ ತಿಳಿಸಿದರು.

ಬಿಜೆಪಿಗೆ ಸಂಬಂಧವಿಲ್ಲ: ‘ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇರಲಿ, ನನ್ನ ಮಗನೇ ಆಗಿರಲಿ ಶಿಕ್ಷೆ ವಿಧಿಸಿರಿ, ಆದರೆ ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.

ಇದನ್ನು ಬಳಸಿಕೊಂಡು ಬಿಜೆಪಿ ಹಾಗೂ ಪಕ್ಷದ ಮುಖಂಡರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿ. ಬಸವಣ್ಣನವರ ಹೆಸರಿನಲ್ಲಿ ಚುನಾವಣೆಯನ್ನು ಗೆಲ್ಲಲು ಷಡ್ಯಂತ್ರ ಮಾಡುವುದು ಸರಿಯಲ್ಲ. ಗ್ರಾಮದ ಸೌಹಾರ್ದ, ಶಾಂತಿ ಕದಡುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಲಕ್ಷಣ ಗುಣದಾಳ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.