ADVERTISEMENT

ತೊಗರಿ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:18 IST
Last Updated 9 ಜನವರಿ 2017, 9:18 IST
ಸಿಂದಗಿ: ಆಲಮೇಲ, ದೇವರಹಿಪ್ಪರಗಿ, ಮೋರಟಗಿ, ಕಲಕೇರಿ ಹೋಬಳಿಗಳಲ್ಲಿ ಸರ್ಕಾರ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
 
ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ, ರೈತ ಮುಖಂಡ ಎಚ್.ಬಿ.ಚಿಂಚೋಳಿ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಾಯದಿಂದ ಉತ್ತರಕರ್ನಾಟಕದ ತೊಗರಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ತಾಲ್ಲೂಕು ಮಟ್ಟ ದಲ್ಲಿ ಒಂದು ತೊಗರಿ ಖರೀದಿ ಕೇಂದ್ರ ಸ್ಥಾಪಿಸಿರುವುದು ಸ್ವಾಗತಾರ್ಹ. ಆದರೆ ಒಂದೇ ತೊಗರಿ ಖರೀದಿ ಕೇಂದ್ರದ ಮೂಲಕ ಸಾವಿರಾರು ರೈತರ ತೊಗರಿ ಖರೀದಿಸಲು ಆರೇಳು ತಿಂಗಳಾದರೂ ಸಮಯ ಬೇಕಾಗುತ್ತದೆ.
 
ಇದರಿಂದಾಗಿ ರೈತರಿಗೆ ತುಂಬಾ ತೊಂದರೆಯಾಗುತ್ತದೆ.  ತೊಗರಿ ಬೆಳೆ ಶೀಘ್ರಗತಿಯಲ್ಲಿ ಖರೀದಿಯಾಗ ಬೇಕಾದರೆ ಸರ್ಕಾರ ಕೂಡಲೇ ಹೋಬಳಿಗೊಂದು ಖರೀದಿ ಕೇಂದ್ರ ಸ್ಥಾಪಿಸುವುದು ಅತ್ಯಗತ್ಯ ಎಂದರು.
 
ರೈತರ ಬೆಳೆ ಸೂಕ್ತ ಸಮಯದಲ್ಲಿ ಮಾರಾಟ ಆಗದಿದ್ದರೆ ಕಷ್ಟ. ಅದಕ್ಕಾಗಿ ರೈತರು ಖಾಸಗಿ ವ್ಯಾಪಾರಸ್ಥರಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಖಾಸಗಿ ವ್ಯಾಪಾರಸ್ಥರಲ್ಲೂ ಬೆಳೆಯ ಹಣ ಬೇಗ ತಮ್ಮ ಕೈಗೆ ಸಿಗಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.
 
ಅದೆಷ್ಟೋ ರೈತರಿಗೆ ತಿಂಗಳುಗಳೇ ಗತಿಸಿದರೂ ಹಣ ಸಿಕ್ಕಿಲ್ಲ . ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದಾಗಿ ವ್ಯಾಪಾರಸ್ಥರು ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಖಾತೆಗೆ ಹಣ ಜಮೆ ಮಾಡಿಲ್ಲ ಎಂಬುದು ಕಂಡು ಬಂದಿದೆ ಎಂದು ತಿಳಿಸಿದರು.
 
ಈ 2–3 ದಿನಗಳಲ್ಲಿ ಸರ್ಕಾರ ಹೋಬಳಿಗೆ ಒಂದು ಖರೀದಿ ಕೇಂದ್ರ ಸ್ಥಾಪಿಸದಿದ್ದರೆ ರೈತರ ಚಳುವಳಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಅವರು ಬೆದರಿಕೆ ಹಾಕಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಸುಲ್ಪಿ, ಶರಣಬಸವ ಭಾಸಗಿ, ಹಣಮಂತ ಬಿಜಾಪುರ, ಎಸ್.ಎಂ.ಹೇರ, ರುದ್ರಪ್ಪ ಭಾಸಗಿ, ಶಿವಲಿಂಗಪ್ಪ ಡಂಬಳ, ಜಿ.ಆರ್.ಪಾಟೀಲ ಯಂಕಂಚಿ, ಸಿದ್ದು ಚೌಧರಿ ಕನ್ನೊಳ್ಳಿ ಇದ್ದರು.
 
***
3,500 ರೈತರು ಹೆಸರು ನೋಂದಾಯಿಸಿದ್ದರೂ ಸಿಂದಗಿಯಲ್ಲಿರುವ ಖರೀದಿ ಕೇಂದ್ರದಲ್ಲಿ ಕಳೆದ 10 ದಿನಗಳಲ್ಲಿ ಕೇವಲ 50 ಜನ ರೈತರ ತೊಗರಿ ಮಾತ್ರ ಖರೀದಿಸಲಾಗಿದೆ.
-ಚಂದ್ರಗೌಡ ಪಾಟೀಲ
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.