ADVERTISEMENT

ದೀಪ ಇಲ್ಲದೇ ಚಲಿಸಿದ ಬಸ್!

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:48 IST
Last Updated 8 ಜುಲೈ 2017, 6:48 IST

ಮುದ್ದೇಬಿಹಾಳ: ವಿಜಯಪುರದಿಂದ ಮುದ್ದೇಬಿಹಾಳಕ್ಕೆ ಬರುತ್ತಿದ್ದ  ಪಟ್ಟಣದ ಸಾರಿಗೆ ಘಟಕದ ಬಸ್ ಸಂಖ್ಯೆ ಕೆಎ 28 ಎಫ್–1708 ಹೆಡ್ ಲೈಟ್‌ಗಳಿಲ್ಲದೇ ಸಂಚರಿಸುವ ಮೂಲಕ ಅದರಲ್ಲಿದ್ದ 19 ಜನ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪಟ್ಟಣಕ್ಕೆ ಬಂದಿಳಿದ ಘಟನೆ ಶುಕ್ರವಾರ ಸಂಜೆ ನಡೆಯಿತು.

ಬಸ್ ಕತ್ತಲೆಯಲ್ಲಿಯೇ ಸಂಚರಿಸುತ್ತ ಬಂದಿದೆ. ಬಸ್ಸಿನಲ್ಲಿ ಪ್ರಯಾಣಿಸುವವರೆಲ್ಲರೂ ಲೈಟ್ ಇಲ್ಲದೇ ಸಂಚರಿಸುತ್ತಿರುವಕ್ಕೆ ಸಾಕಷ್ಟು ಆತಂಕಕ್ಕೆ ಒಳಗಾದರಲ್ಲದೇ ಈ ಸಂಬಂಧ ಬಸ್ ಚಾಲಕ ಹಾಗೂ ನಿರ್ವಾಹಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೊನೆಗೆ ಅವರ ಸಹಾಯಕತೆ ಕಂಡು ಮೌನಕ್ಕೆ ಶರಣಾದರು.

ಬಸ್ ಹೆಡ್ ಲೈಟ್ ಇಲ್ಲದೇ ಸಂಚರಿ­ಸು­ತ್ತಿರುವ ಬಗ್ಗೆ  ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಅವರನ್ನು ಮಾತನಾಡಿ­ಸಿದರೆ, ‘ಹೀಗಾಗಲು ಸಾಧ್ಯ­ವಿಲ್ಲ, ನಾನು ಇದೇ ತಾನೇ ಡ್ಯೂಟಿ ಮುಗಿಸಿ ಮರಳಿ ವಿಜಯಪುರಕ್ಕೆ ಬಂದೆ, ಈ ಬಗ್ಗೆ ವಿಚಾರಿಸಿ ಮುಂದೆ ಹೀಗಾಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ADVERTISEMENT

‘ಹಳ್ಳೂರ ಕ್ರಾಸ್ ಬಳಿ ನಾನು ಬಸ್ಸಿಗಾಗಿ ಕಾಯುತ್ತಿದ್ದೆ, ನನಗೆ ನನ್ನ ಪಕ್ಕದಲ್ಲಿ ಬಸ್ ನಿಂತಾಗಲೇ ಬಸ್ ಬಂದಿದ್ದು ಗೊತ್ತಾಯಿತು. ಅಲ್ಲಿಂದ ಮುದ್ದೇಬಿಹಾಳಕ್ಕೆ ಬರುವವರೆಗೆ ಬಸ್‌ನ್ನು ಚಾಲಕ ನಿಧಾನವಾಗಿ ನಡೆಸಿಕೊಂಡು ಬಂದ, ನಾವೆಲ್ಲ ಏನು ಅಪಾಯ­ವಾಗುತ್ತದೆಯೋ ಎಂದು ಜೀವಭಯ­ದಿಂದಲೇ ಬಂದೆವು. ಈ ಡಿಪೋದಲ್ಲಿ ಏನೂ ಸರಿ ಇಲ್ಲ’ ಎಂದು ಖಾಸಗಿ ಶಾಲಾ ಶಿಕ್ಷಕ ಶರಣು ಹಿರೇಕುರುಬರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.